ಸ್ಥಳೀಯ ಬೆಳೆಗಾರರನ್ನು ಪ್ರೋತ್ಸಾಹಿಸಿ...

Mela 1
Published on

ಸುಗುಣೇಂದ್ರ ತೀರ್ಥ ಶ್ರೀಪಾದರು ಕರೆ

ಹಲಸು-ಮಾವು ಮೇಳಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಪತ್ರಂ ಪುಷ್ಪಂ ಫಲಂ ತೋಯಂ ಹೀಗೆ ಯಾವುದನ್ನೇ ನೀಡಿದರೂ ನಾನು ಸಂತೋಷಗೊಳ್ಳುತ್ತೇನೆ ಎಂದು ಭಗವಾನ್​ ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ ತಿಳಿಸಿದ್ದಾನೆ. ಆತನಿಗೆ ಪ್ರಿಯವಾದ ಹಾಗೂ ಕರಾವಳಿಯ ಭಾಗದಲ್ಲಿ ಹೇರಳವಾಗಿ ದೊರೆಯುವ ಹಲಸು-ಮಾವುಗಳ ಮೇಳವನ್ನು ಇಲ್ಲಿ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ಸ್ಥಳೀಯ ಬೆಳೆಗಾರರನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಕರೆ ನೀಡಿದರು.

ಉಡುಪಿ ಶ್ರೀಕೃಷ್ಣ ಮಠದ ಸಮೀಪದಲ್ಲಿರುವ ಗೀತಾ ಮಂದಿರದಲ್ಲಿ ಜೂ.13ರಿಂದ 15ರ ವರೆಗೆ ನಡೆಯಲಿರುವ ಹಲಸು-ಮಾವು ಮೇಳಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಬಗೆಬಗೆಯ ಖಾದ್ಯ

Mela 2
ಗೀತಾ ಮಂದಿರದಲ್ಲಿ ಆಯೋಜಿಸಿರುವ ಭಾರತ ಮೇಳದ ಮುಂದುವರಿದ ಭಾಗವಾಗಿ ಹಣ್ಣುಗಳ ಮೇಳ ಆಯೋಜಿಸಲಾಗಿದೆ. ಅವುಗಳ ವೈವಿಧ್ಯಮಯ ಖಾದ್ಯಗಳೂ ಸಹ ಇಲ್ಲಿ ಲಭಿಸಲಿದೆ. ಜನರು ಶ್ರೀಕೃಷ್ಣನ್ನು ಸ್ಮರಿಸುತ್ತ ಮೇಳದ ರುಚಿ ಸವಿಯಬಹುದು. ತನ್ಮೂಲಕ ಕರ್ಮ ಫಲದ ಸಮರ್ಪಣೆಯೂ ಆಗುವುದು ಎಂದು ಸುಗುಣೇಂದ್ರ ಶ್ರೀ ನುಡಿದರು.

ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.

Mela 3
ಭವಾನಿ ಗ್ರೂಪ್ಸ್​ನ ಮಾಲೀಕ ಕುಸುಮೋದರ ಶೆಟ್ಟಿ, ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಕಾರ್ಯದರ್ಶಿ ರತೀಶ ತಂತ್ರಿ, ಅನಂತ ಕೃಷ್ಣ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್​, ಪ್ರಮೋದ ಸಾಗರ ಇತರರು ಉಪಸ್ಥಿತರಿದ್ದರು.

ಭಾರತ ಮೇಳದ ಸಂಚಾಲಕ ರಮಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಗೀತಾ ಮಂದಿರದಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಹಲಸು-ಮಾವು ಮೇಳದ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net