ದಶಾವತಾರಗಳಲ್ಲಿ ಕೃಷ್ಣನದು ಪೂರ್ಣಾವತಾರ...

Mandala Lead
Published on

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ಮಂಡಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಗವಂತನ ದಶಾವತಾರಗಳಲ್ಲಿ ಎಲ್ಲ ಅವರತಾರಗಳೂ ಭಾಗಶಃ ಅನುಗ್ರಹಾರ್ಥವಾದುದಾಗಿದೆ. ಆದರೆ, ಕೃಷ್ಣಾವತಾರ ಮಾತ್ರ ಪರಿಪೂರ್ಣ ಅವತಾರವಾಗಿದೆ. ಈ ಅವತಾರದಲ್ಲಿ ಸಮಸ್ತ ಭೂಮಂಡಲದ ಮಾನವರಿಗೆ ಶ್ರೀಕೃಷ್ಣನು ಸಂಪೂರ್ಣ ಅನುಗ್ರಹ ನೀಡಿದ್ದಾನೆ. ಶ್ರೀಕೃಷ್ಣಾವತಾರದ ವ್ಯಾಪಕ ಆಚರಣೆಗಾಗಿ ಈ ಬಾರಿ ಚಾಂದ್ರ-ಸೌರ ಎಂದು ಎರಡು ದಿನ ಆ.14-15 ಮತ್ತು ಸೆ.16ರಂದು ಜನ್ಮಾಷ್ಟಮಿ ಬಂದಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಜನ್ಮಾಷ್ಟಮಿ ನಿಮಿತ್ತ 48 ದಿನಗಳ ಕಾಲ ರಾಜಾಂಗಣದಲ್ಲಿ ಆಯೋಜಿಸಿರುವ ಶ್ರೀಕೃಷ್ಣಜನ್ಮಾಷ್ಟಮಿ ಮಂಡಲೋತ್ಸವ ಕಾರ್ಯಕ್ರಮಕ್ಕೆ ಆಗಸ್ಟ್​ 1ರಂದು ಸಂಜೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಸರ್ಕಾರಿ ರಜೆ ಘೋಷಿಸಿ

Raja
ಜಗತ್ತಿನ ಕಲ್ಯಾಣಕ್ಕಾಗಿ, ಸನಾತನ ಧರ್ಮದ ರಕ್ಷಣೆಗಾಗಿಯೇ ಶ್ರೀಕೃಷ್ಣನ ಅವತಾರವಾಗಿದೆ. ಆತನ ಸ್ಮರಣೆ ಎಲ್ಲರ ಕರ್ತವ್ಯವೂ ಆಗಿದೆ. ಆದರೆ, ವ್ಯಕ್ತಿಗಳ ಜಯಂತಿಗೆ ರಜೆ ನೀಡುವ ಸರ್ಕಾರಗಳು ಜನ್ಮಾಷ್ಟಮಿಗೆ ರಜೆ ಘೋಷಿಸಿಲ್ಲ. ದೇಶಕ್ಕೆ ಹಾನಿ ಮಾಡಿದಂತಹವರ ಜಯಂತಿಗೂ ರಜೆ ಇದೆ. ಭಗವದ್ಗೀತೆಯ ಮೂಲಕ ಮನುಕುಲದ ಹಿತ ಕಾಯ್ದ ಜನ್ಮಾಷ್ಟಮಿಗೆ ಸರ್ಕಾರ ರಜೆ ಘೋಷಿಸಬೇಕು ಎಂದು ಸುಗುಣೇಂದ್ರ ಶ್ರೀಗಳು ಆಗ್ರಹಿಸಿದರು.

'ಶ್ರೀಕೃಷ್ಣಾನುಗ್ರಹ' ಪ್ರಶಸ್ತಿ ಪ್ರದಾನ

Sanmana
ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಮಾಜಿ ಅಧ್ಯಕ್ಷ ಅರವಿಂದ ಆಚಾರ್ಯ ಅವರಿಗೆ ಬ್ರಾಹ್ಮಣ ಸಂಘಟನೆಯ ಹಿನ್ನೆಲೆಯಲ್ಲಿ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಿರಿಯ ಶಿಷ್ಯ ಸುಶ್ರೀಂದ್ರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​ ಉಪಸ್ಥಿತರಿದ್ದರು.
Sharma
ಸಭಾ ಕಾರ್ಯಕ್ರಮದ ಬಳಿಕ ಯುವ ಕಲಾವಿದ ಪ್ರಣವ್​ ಅಡಿಗ-ಕೊಳಲು ವಾದನ, ಖ್ಯಾತ ವಾಗ್ಮಿ ಬಾರ್ಕೂರಿನ ದಾಮೋದರ ಶರ್ಮ ಅವರಿಂದ ಕೃಷ್ಣನೆಂಬ ಬೆಳಕು ಕುರಿತು ಉಪನ್ಯಾಸ ನೆರವೇರಿತು. ನಂತರ ಬೆಂಗಳೂರಿನ ಸಿಲಂಬಂ ಅಕಾಡೆಮಿ ಆಫ್ ಫೈನ್ ಆರ್ಟ್ಸ್​ ಅವರಿಂದ ಕೃಷ್ಣಾರ್ಪಣ ಎಂಬ ಭರತನಾಟ್ಯ ಪ್ರದರ್ಶನ ಜರುಗಿತು.

ಸಾಮೂಹಿಕ ಮಂತ್ರೋಪದೇಶ ದೀಕ್ಷೆ

Prasanna
ಮಂಡಲೋತ್ಸವದ ನಿಮಿತ್ತ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಶುಕ್ರವಾರ ಬೆಳಗ್ಗೆ ಸೂಯೋರ್ದಯ ಕಾಲದಲ್ಲಿ ಸುಗುಣೇಂದ್ರ ತೀರ್ಥ ಶ್ರೀಪಾದರು ಕೋಟಿ ಕೃಷ್ಣ ಜಪ ಯಜ್ಞದ ಅಂಗವಾಗಿ ವಿಶ್ವಾದ್ಯಂತ ಇರುವ ಶ್ರೀಕೃಷ್ಣ ಭಕ್ತರಿಗೆ ಸ್ವಾಮಿ ಶ್ರೀಕೃಷ್ಣಾಯ ನಮಃ ಎಂಬ ಸಾಮೂಹಿಕ ಮಂತ್ರೋಪದೇಶ ದೀಕ್ಷೆ ನೀಡಿದರು. ಉಪಸ್ಥಿತರಿದ್ದ ಭಕ್ತರು 108 ಬಾರಿ ಪಠಿಸಿದರು. ಇದಕ್ಕೂ ಮೊದಲು ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಉದ್ಘಾಟಿಸಿದರು. ವಿವಿಧ ಯೋಗ ಸಂಸ್ಥೆಗಳ ಯೋಗಾರ್ಥಿಗಳು 48 ಸೂರ್ಯ ನಮಸ್ಕಾರ ಮಾಡಿದರು. ರಾಘವೇಂದ್ರ ಭಟ್​ ಪಣಿಯಾಡಿ ಸ್ವಾಗತಿಸಿದರು. ವಿದ್ವಾನ್​ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್​ ವಂದಿಸಿದರು.

ಸೂರ್ಯ ನಮಸ್ಕಾರ ಮಾಡಲು ಕರೆ

ಜಗತ್ತಿನಾದ್ಯಂತ ರೋಗಗಳು ಉಲ್ಬಣಿಸುತ್ತಿವೆ. ಭಾರತವನ್ನು ಮಧುಮೇಹಿಗಳ ರಾಜಧಾನಿಯಾಗಿ ಗುರುತಿಸಲಾಗಿದೆ. ಆರೋಗ್ಯ ವರ್ಧನೆಗಾಗಿ ಎಲ್ಲರೂ ಸೂರ್ಯ ನಮಸ್ಕಾರ ಮಾಡಬೇಕು. ಅದರಿಂದ ಎಷ್ಟೋ ಬಗೆಯ ವ್ಯಾಧಿಗಳು ವಾಸಿಯಾಗುತ್ತವೆ. ಇದು ಮಂಡಲೋತ್ಸವದ ಸಂದೇಶವೆಂದು ಸುಗುಣೇಂದ್ರ ಶ್ರೀ ತಿಳಿಸಿದರು.

ನಮ್ಮ ಚತುರ್ಥ ಪರ್ಯಾಯವನ್ನು ಗೀತಾ ಪರ್ಯಾಯವಾಗಿ ಆಚರಿಸುತ್ತಿದ್ದು ಜನ್ಮಾಷ್ಟಮಿಯನ್ನು ಸ್ಮರಣೀಯವಾಗಿಸಲು ಶ್ರೀಕೃಷ್ಣ ಮಂಡಲೋತ್ಸವ ಆರಂಭಿಸಿದ್ದೇವೆ. ಕೃಷ್ಣರೂಪದಲ್ಲಿ ಬಂದು ಉಪದೇಶ ಹಾಗೂ ಲೀಲೆಯ ಮೂಲಕ ನಮ್ಮನ್ನೆಲ್ಲ ಅನುಗ್ರಹಿಸಿದ್ದಾನೆ. ಹೀಗಾಗಿ ಜನ್ಮಾಷ್ಟಮಿಯ ಆಶಯವು ಭಾವ ಭಗವಂತನಿಗೆ ಕೃತಜ್ಞತೆ ಸಲ್ಲಿಸುವುದಾಗಿದೆ. ಪಡೆದದ್ದನ್ನು ಮರಳಿ ನೀಡುವುದೇ ಧರ್ಮದ ಸಾರವಾಗಿದೆ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net