

ವಿಜಯವಾಣಿ ಸುದ್ದಿಜಾಲ ಉಡುಪಿ
ಅಧ್ಯಾತ್ಮ ಕ್ಷೇತ್ರದ ಮೇಲೆ ಪಾಶ್ಚಿಮಾತ್ಯ ಗಾಳಿ ವಿಪರೀತವಾಗಿ ಬೀಸಿ ಆಧ್ಯಾತ್ಮಿಕ ವಿಚಾರಗಳೆಲ್ಲ ಹಾರಿ ಹೋಗುತ್ತಿರುವ ಸಂದರ್ಭದಲ್ಲಿ ತಮ್ಮ ಆಧ್ಯಾತ್ಮಿಕ ಪ್ರವಚನಗಳ ಮೂಲಕ ಅಧ್ಯಾತ್ಮ ಕ್ಷೇತ್ರಕ್ಕೆ ರಕ್ಷಣೆ ಕೊಟ್ಟು ಆಧ್ಯಾತ್ಮಿಕ ಶಕ್ತಿ ಉಳಿಸಿದ ಹೆಗ್ಗಳಿಕೆ, ಜನರನ್ನು ಅಧ್ಯಾತ್ಮದತ್ತ ಆಕರ್ಷಿಸಿದ ಕೀರ್ತಿ ಬನ್ನಂಜೆ ಗೋವಿಂದಾಚಾರ್ಯರಿಗೆ ಸಲ್ಲುತ್ತದೆ. ಈ ಹಿಂದೆ ತಂತ್ರಜ್ಞಾನ ಇಲ್ಲದ್ದರಿಂದ ಎಷ್ಟೋ ಆಧ್ಯಾತ್ಮಿಕ ವಿಚಾರ ಧಾರೆ ಅಲಭ್ಯ. ಆದರೆ, ಬನ್ನಂಜೆಯವರ ಎಲ್ಲ ಪ್ರವಚನ, ಆಧ್ಯಾತ್ಮಿಕ ವಿಚಾರಧಾರೆ ಮರಣದ ನಂತರವೂ ಲಭ್ಯವಿದ್ದು ಅವರು ಅಜರಾಮರ ಆಗಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್ ಇತರರಿದ್ದರು.
ಕವಿತಾ ಉಡುಪ ಹಾಗೂ ಸುಮಾ ಶಾಸ್ತ್ರಿ ಪ್ರಾರ್ಥಿಸಿದರು. ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಡಾ. ವೀಣಾ ಬನ್ನಂಜೆ ವಂದಿಸಿದರು.
ತತ್ವಶಾಸ್ತ್ರಗಳ ಬೋಧನೆ ಹಾಗೂ ಪ್ರಸಾರಕ್ಕೆ ಯಾವುದೇ ಸೀಮೆ ಇರಬಾರದು. ಅದು ಸೀಮಾತೀತ ಆಗಿರಬೇಕೆಂಬ ಬನ್ನಂಜೆ ಗೋವಿಂದಾಚಾರ್ಯರ ನಿಲುವೇ ನಮ್ಮ ವಿದೇಶ ಪ್ರವಾಸಕ್ಕೆ ಸ್ಫೂರ್ತಿ. ವಿದೇಶಕ್ಕೆ ಮೋಜಿಗಾಗಿ ನಾವು ಹೋಗಿದ್ದಲ್ಲ. ಅಲ್ಲಿನ ನೆಲದಲ್ಲೂ ಮಧ್ವತತ್ವ ಪ್ರಸಾರ ಮಾಡಲೆಂದೇ ಹೋಗಿದ್ದು. ಕೃಷ್ಣ ಕೇವಲ ಉಡುಪಿಗೆ ಸೀಮಿತನಲ್ಲ. ಆತ ವಿಶ್ವ ನಾಯಕ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ