ದೊಡ್ಡ ಸಭಾಂಗಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿತರಣೆಗೆ ಸಲಹೆ

ravendra kalashetra
Published on

ಬೆಂಗಳೂರು: ರಾಜ್ಯ ಸರ್ಕಾರ ಪ್ರತಿ ವರ್ಷ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನಡೆಯುವ ರವೀಂದ್ರ ಕಲಾಕ್ಷೇತ್ರದಲ್ಲಿ ಹೆಚ್ಚಿನ ಜನರಿಗೆ ಸಮಾರಂಭ ವೀಕ್ಷಿಸಲು ಸಾಧ್ಯವಾಗದ ಕಾರಣ ಮುಂದಿನ ಬಾರಿಯಿಂದ ಬೃಹತ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂಬ ಕೂಗು ಕೇಳಿಬಂದಿದೆ.

ಕೆಲ ವರ್ಷಗಳಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಆಗಮಿಸುತ್ತಿದ್ದಾರೆ. ಅದರಲ್ಲೂ ಸಾಧಕರ ಜತೆ ಅವರ ಸಹಾಯಕರು ಹಾಗೂ ಕುಟುಂಬ ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ನೆರೆದಿರುತ್ತಾರೆ. ಇವರಲ್ಲದೆ ಕನ್ನಡ ಸಾಂಸ್ಕೃತಿಕ ಕ್ಷೇತ್ರದ ವಿವಿಧ ಗಣ್ಯರು, ಆಹ್ವಾನಿತರ ಸಂಖ್ಯೆಯೂ ಹೆಚ್ಚಿರುತ್ತದೆ. ಕಾರ್ಯಕ್ರಮ ವರದಿ ಮಾಡಲು ಮುದ್ರಣ ಹಾಗೂ ದೃಶ್ಯ ಮಾಧ್ಯಮದ ಮಂದಿ ಸೇರಿ ಒಟ್ಟು 2,000ಕ್ಕೂ ಅಧಿಕ ಮಂದಿ ನೆರೆದಿರುತ್ತಾರೆ. ಇದರ ಅರ್ಧದಷ್ಟು ಜನರು ಮಾತ್ರ ಸಭಾಂಗಣದಲ್ಲಿ ಕುಳಿತು ವೀಕ್ಷಿಸಲು ಅವಕಾಶ ಇದೆ. ಉಳಿದವರಿಗೆ ಹೊರಗಡೆ ಎಲ್‌ಇಡಿ ಸ್ಕ್ರೀನ್ ಅಳವಡಿಸಿದ್ದರೂ, ಸಭಾಂಗಣದಲ್ಲೇ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಮಾಡಿಕೊಡುವಂತೆ ಆಯೋಜಕರು ಹಾಗೂ ಪೊಲೀಸರೊಂದಿಗೆ ವಾಗ್ವಾದ ಸಾಮಾನ್ಯವಾಗುತ್ತಿದೆ.

ಈ ಬಾರಿಯೂ ನ.1ರಂದು ಪುರಸ್ಕೃತರ ಜತೆ ಅವರ ಕುಟುಂಬದವರು, ಬಂಧು-ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇವರಲ್ಲಿ ಕೆಲವರಿಗೆ ಆಸನ ಸಿಗದೆ ನಿಂತೇ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. ಈ ಸಮಸ್ಯೆ ನಿವಾರಿಸಲು ಸಮಾರಂಭವನ್ನು ದೊಡ್ಡ ಸಭಾಂಗಣದಲ್ಲಿ ಆಯೋಜಿಸಿದರೆ ಇನ್ನಷ್ಟು ಮಂದಿ ಪಾಲ್ಗೊಳ್ಳಲು ಸಾಧ್ಯ ಎಂಬುದಾಗಿ ಹಲವು ಮಂದಿ ಪ್ರತಿಕ್ರಿಯಿಸಿದರು.

ಇಸ್ರೋ ಪರ ಚಪ್ಪಾಳೆಯ ಸುರಿಮಳೆ:

ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು ಇಸ್ರೋ ಮುಖ್ಯಸ್ಥ ಸೋಮನಾಥ್ ಅವರಿಗೂ ನೀಡಲಾಗಿದೆ. ಚಂದ್ರಯಾನ ಯೋಜನೆ ಯಶಸ್ವಿಗೆ ಕಾರಣರಾಗಿದ್ದಕ್ಕೆ ಸರ್ಕಾರ ಅವರಿಗೆ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ವಿತರಿಸುವ ಮುನ್ನ ಹಾಗೂ ನಂತರ ಇಸ್ರೋ ಹಾಗೂ ಸೋಮನಾಥ್ ಹೆಸರೇಳುತ್ತಿದ್ದಂತೆ ಸಭಿಕರು ಭಾರೀ ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದರು. ಸಮಾರಂಭದಲ್ಲಿ ಅತಿಥಿಗಳ ಸಾಲಿನಲ್ಲೇ ಸೋಮನಾಥ್‌ಗೂ ಆಸನದ ವ್ಯವಸ್ಥೆ ಮಾಡಿದ್ದು ಚಂದ್ರಯಾನ ಯಶಸ್ವಿಗೆ ಸರ್ಕಾರ ಅವರನ್ನು ಹೆಚ್ಚು ಗೌರಯುತವಾಗಿ ನಡೆಸಿಕೊಂಡಿತು.

ಅರ್ಧಕ್ಕೆ ನಿರ್ಗಮಿಸಿದ ಡಿಸಿಎಂ:

ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಸಹಿತ ಸಚಿವ ಸಂಪುಟದ ಹಿರಿಯ ಸದಸ್ಯರು ಹಾಜರಿದ್ದರು. ಕೆಲ ಸಾಧಕರಿಗೆ ಪ್ರಶಸ್ತಿ ವಿತರಿಸಿದ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅರ್ಧದಲ್ಲೇ ತೆರಳಿದರು. ಬೇರೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಕಾರಣ ಅವರು ಸಿಎಂಗೆ ತಿಳಿಸಿ ಹೊರನಡೆದರು.

ಪ್ರಶಸ್ತಿ ವಿತರಣೆಗೆ 1 ಗಂಟೆ !

2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು 68 ಸಾಧಕರು ಹಾಗೂ 10 ಸಂಘ-ಸಂಸ್ಥೆಗಳನ್ನು ಆಯ್ಕೆ ಆಗಿವೆ. ಇಷ್ಟೂ ಸಾಧಕರನ್ನು ಒಮ್ಮೆ ಒಬ್ಬರಿಗೆ ಮಾತ್ರ ಸನ್ಮಾನ ಮಾಡಲಾಯಿತು. ಇದರಿಂದಾಗಿ ಸಿಎಂ ಹಾಗೂ ಇತರ ಗಣ್ಯರು ಒಂದು ಗಂಟೆ ಕಾಲ ನಿಂತೇ ಪುರಸ್ಕೃತರನ್ನು ಸನ್ಮಾನಿಸಲಾಯಿತು.  ಒಟ್ಟಾರೆ ಸಮಾರಂಭ ಮೂರು ಗಂಟೆ ಕಾಲ ನಡೆಯಿತು. ಕಡೆಯವರೆಗೂ ಸಿಎಂ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net