

ಮೈಸೂರು: ನೀರಾವರಿ ಪ್ರದೇಶವಾದರೂ ಮೈಸೂರು ಭಾಗದಲ್ಲಿ ಕಬ್ಬಿನ ಇಳುವರಿ ಕಡಿಮೆಯಾಗಿದೆ ಎಂದು ಬೆಳಗಾವಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ನಿರ್ದೇಶಕ ಸಿ.ಬಿ.ಪಾಟೀಲ್ ಹೇಳಿದರು
ಕೋರಮಂಡಲ್ ಶುಗರ್ಸ್ ಲಿ., ಎಸ್.ನಿಜಲಿಂಗಪ್ಪ ಶುಗರ್ ಇನ್ಸ್ಟಿಟ್ಯೂಟ್, ಕೊಯಮತ್ತೂರು ಐಸಿಎಆರ್, ಎಂ.ವಿಶ್ವೇಶ್ವರಯ್ಯ ಶುಗರ್ ಕೇನ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಸಹಯೋಗದಲ್ಲಿ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ದಕ್ಷಿಣ ಕರ್ನಾಟಕದ 22ನೇ ಕಬ್ಬು ಸಂಶೋಧನೆ ಮತ್ತು ಅಭಿವೃದ್ಧಿ’ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಂಡ್ಯ, ಮೈಸೂರು, ಹಾಸನ ಭಾಗದಲ್ಲಿ ಇಳುವರಿ ಕಡಿಮೆಯಿದೆ. ಒಂದು ಹೆಕ್ಟೇರ್‌ಗೆ 80-100 ಟನ್ ಇಳುವರಿ ಇದೆ. ಜುಲೈನಲ್ಲಿ ಹೆಚ್ಚು ಬಿತ್ತನೆ, ಜುಲೈ- ಆಗಸ್ಟ್‌ನಲ್ಲಿ ಕಟಾವು ಇರುತ್ತದೆ. ಜುಲೈ- ಆಗಸ್ಟ್‌ನಲ್ಲಿ ಮಳೆ ಇದ್ದು, ಈ ಸಂದರ್ಭದಲ್ಲಿ ಕಟಾವು ನಡೆಯುವ ಕಾರಣ ಸಕ್ಕರೆ ರಿಕವರಿ ಕಡಿಮೆ. ಹೀಗಾಗಿ ಆಗಸ್ಟ್ ನಂತರ ಕಟಾವು ಮಾಡುವುದು ಲಾಭದಾಯಕ ಆಗಲಿದೆ ಎಂದು ಸಲಹೆ ನೀಡಿದರು.
ರಾಜ್ಯದ 16 ಜಿಲ್ಲೆಗಳಲ್ಲಿ ಕಬ್ಬು ಕೃಷಿ ಇದೆ. ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯಲ್ಲಿ ಒಂದು ರೀತಿಯ ಇಳುವರಿ ಬಂದರೆ, ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ರೀತಿಯ ಇಳುವರಿ ಬಂದಿದೆ ಎಂದರು.
ಕರ್ನಾಟಕ ಸಕ್ಕರೆ ಉತ್ಪಾದನೆಯಲ್ಲಿ ದೇಶದ 3ನೇ ರಾಜ್ಯವಾಗಿದೆ. ಉತ್ತರಪ್ರದೇಶ, ಮಹಾರಾಷ್ಟ್ರ ನಂತರ ರಾಜ್ಯದಲ್ಲಿ 7.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದು, ಒಂದು ಹೆಕ್ಟೇರ್‌ನಲ್ಲಿ 80-100 ಟನ್ ಇಳುವರಿ ಸರಾಸರಿ ಇದೆ ಎಂದು ತಿಳಿಸಿದರು.
ಗ್ರಾಮೀಣ ಅಭಿವೃದ್ಧಿಗೆ ಸಕ್ಕರೆ ಕಾರ್ಖಾನೆಗಳ ಕೊಡುಗೆ ಅಪಾರವಾಗಿದೆ. ಸಕ್ಕರೆಯೊಂದಿಗೆ ಉಪ ಉತ್ಪನ್ನಗಳ ಉತ್ಪಾದನೆಗೂ ಈ ಭಾಗದ ಕೈಗಾರಿಕೆಗಳು ಒತ್ತು ನೀಡಬೇಕು.ಹೊಸ ತಳಿಗಳ ಬಳಕೆಯಿಂದಾಗಿ ರೈತರಿಗೆ ಅನುಕೂಲವಾಗಲಿದೆ ಎಂದರು.
ಹೆಚ್ಚಿನ ಪ್ರಮಾಣದಲ್ಲಿ ಔಷದ, ರಾಸಾಯಿನಿಕ ಬಳಕೆ, ಅತಿಯಾದ ನೀರಿನ ಬಳಕೆಯಿಂದಲೂ ಇಳುವರಿ ಕಡಿಮೆಯಾಗಲಿದೆ. ಕಳಪೆ ಬಿತ್ತನೆ ಬೀಜಗಳ ಬಳಕೆಯಿಂದಲೂ ಇಳುವರಿ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ. ಸಾಂಪ್ರದಾಯಿಕ ಮಾದರಿಯ ಅಳವಡಿಕೆಯಿಂದ ಇಳುವರಿ ಕುಸಿತಕ್ಕೆ ಕಾರಣವಾಗಿದೆ ಎಂದರು.
ಕೃಷಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ವಿಷಕಂಠ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರದೇಶದಲ್ಲಿ ಕಬ್ಬು ಬೆಳೆಯುವ ರೈತರಾಗಿದ್ದಾರೆ. ಕಬ್ಬು ಬೆಳೆಗೆ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದರು. ಕೋರಮಂಡಲ್ ಶುಗರ್ಸ್ ಲಿಮಿಟೆಡ್ ಉಪಾಧ್ಯಕ್ಷ ವಿ.ಜೆ.ರವಿ, ಡಿಜಿಎಂ ಕೆ.ಬಾಬುರಾಜ್, ಮಂಡ್ಯ ಎಂ.ವಿಶ್ವೇಶ್ವರಯ್ಯ ಶುಗರ್ ಕೇನ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ನಿರ್ದೇಶಕ ಎನ್.ರವಿಕುಮಾರ್ ಪಾಲ್ಗೊಂಡಿದ್ದರು.
ಸಂಶೋಧಕರಾದ ಗೋವಿಂದರಾಜು, ಕೆ.ಖಾನ್, ಪಳನಿಸ್ವಾಮಿ, ಸಿ.ಶಂಕರ್ ನಾರಾಯಣ್, ಮೋಹನ್ ರಾಜೇ ಅರಸ್, ಸ್ವಾಮಿಗೌಡ, ಕೇಶವಯ್ಯ ಮತ್ತಿತರರು ಉಪನ್ಯಾಸ ನೀಡಿದರು. ವಿವಿಧ ಕಬ್ಬುಗಳ ಪರಿಚಯ, ತಂತ್ರಜ್ಞಾನಗಳನ್ನು ಪರಿಚಯಿಸುವ ಮಳಿಗೆಗಳ ಪ್ರದರ್ಶನವಿತ್ತು.