ಕಬ್ಬು ಬೆಳೆಗಾರರಿಗೆ ಅನ್ಯಾಯ: ಕಿಸಾನ್ ಸಂಘದ ಪ್ರಮುಖ್ ಸಾಯಿರೆಡ್ಡಿ ಬೇಸರ

kadal photos (4)
Published on

ಮಂಡ್ಯ: ಪ್ರತಿ ಹಂತದಲ್ಲಿಯೂ ಉತ್ತರ ಕರ್ನಾಟಕದಿಂದ ಹಿಡಿದು ಉತ್ತರ ಭಾರತದವರೆಗೂ ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ಕಬ್ಬು ಪ್ರಮುಖ್ ಸಾಯಿರೆಡ್ಡಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ಹಾಗೂ ಕರ್ನಾಟಕ ದಕ್ಷಿಣ ಪ್ರಾಂತ ಕಬ್ಬು ಬೆಳೆಗಾರರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಬ್ಬು ಬೆಳೆಗಾರರು ಹಾಗೂ ರೈತರ ಸಭೆಯಲ್ಲಿ ಮಾತನಾಡಿದರು.

ರಾಜ್ಯದ 17 ಜಿಲ್ಲೆಗಳಲ್ಲಿ 11 ಸಕ್ಕರೆ ಕಾರ್ಖಾನೆಗಳಿವೆ. ನಮಗೆ ಸಾಕಷ್ಟು ಅನ್ಯಾಯವಾಗಿದೆ. ಉತ್ತರ ಕರ್ನಾಟಕದಿಂದ ಹಿಡಿದು ಉತ್ತರ ಭಾರತದವರೆಗೂ ಕೇಂದ್ರ ಘೋಷಣೆ ಮಾಡುವ ಹಣವನ್ನು ರೈತರಿಗೆ ಕೊಟ್ಟು, ಕಬ್ಬಿನ ಕಟಾವು, ಸಾಗಣೆ ಹಣವನ್ನು ಹಿಡಿದುಕೊಂಡು ಉಳಿದ ಹಣ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಕಬ್ಬಿಗೆ ಬೆಲೆ ಹೆಚ್ಚು ಮಾಡಲಾಗಿದೆ ಎಂದು ಹೇಳುತ್ತಿದೆ. ಆದರೆ ಈ ಹಿಂದೆ 9.5 ಸಕ್ಕರೆ ಅಂಶಕ್ಕೆ 2,700 ರೂ. ಇತ್ತು, ಆದರೆ, ಈಗ 3,050 ರೂ. ಮಾಡಿದ್ದರೂ ಸಕ್ಕರೆ ಅಂಶವನ್ನು 10.25ಕ್ಕೆ ಮಾಡುವ ಮೂಲಕ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.

9.5 ಸಕ್ಕರೆ ಅಂಶಕ್ಕೆ 3,050 ರೂ.ಗಳನ್ನು ಕೊಡಬೇಕು. ಈ ದೃಷ್ಟಿಯಿಂದ ಎಲ್ಲ 11 ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯಿಂದ ಮುಖಂಡರು ಮತ್ತು ರೈತರು ಬಂದಿದ್ದಾರೆ. ಸಮಿತಿಯನ್ನು ರಚನೆ ಮಾಡಿ ಈ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಎಥೆನಾಲ್ ಮತ್ತು ಉಪ ಉತ್ಪನ್ನಗಳು ಅಂದರೆ, ಪ್ರಮುಖವಾಗಿ ಶೇ.70 ಹಣವನ್ನು ರೈತರಿಗೆ ಕೊಟ್ಟು ಉಳಿದ ಶೇ.30 ರಷ್ಟು ಹಣವನ್ನು ಕಾರ್ಖಾನೆಯವರು ಇಟ್ಟುಕೊಳ್ಳಬೇಕು ಎಂಬುದು ಸೇರಿದಂತೆ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಸಭೆಯಲ್ಲಿ ಸಂಘದ ಹಾಡ್ಯ ರಮೇಶ್ ರಾಜು, ಯಲಿಯೂರು ಆನಂದ್, ಪಣಕನಹಳ್ಳಿ ವೆಂಕಟೇಶ್, ನಾರಾಯಣಸ್ವಾಮಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net