ಕಾರ್ಖಾನೆ ಗುತ್ತಿಗೆ ನೀಡಿ ಕಬ್ಬು ಬೆಳೆಗಾರರನ್ನು ಉಳಿಸಲಾಗಿದೆ

ಫೋಟೋ ಶೀರ್ಷಿಕೆ 25 ಸಿಆರ್_ಪಿ-1ಎ.
ಚನ್ನರಾಯಪಟ್ಟಣ ತಾಲೂಕು ಶ್ರೀನಿವಾಸಪುರದಲ್ಲಿನ ಎಚ್‌ಎಸ್‌ಎಸ್‌ಕೆ 2022-23ನೇ ವಾರ್ಷಿಕ ಮಹಾಸಭೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. ಜೆ.ವಿಕ್ರಂರಾಜ ಅರಸ್, ಸಿ.ಎನ್.ವೆಂಕಟೇಶ್, ಬಿ.ಜೆ.ಕೃಷ್ಣೇಗೌಡ, ಎನ್.ಸಿ.ನಾರಾಯಣಗೌಡ, ಬಿ.ಎಲ್.ತೇಜಸ್ವಿ ಕಿರಣ್, ಕೆ.ಎಂ.ಜಯರಾಂ ಇತರರಿದ್ದರು.
Published on

ಚನ್ನರಾಯಪಟ್ಟಣ: ಕಾರ್ಖಾನೆಯನ್ನು ಗುತ್ತಿಗೆ ನೀಡುವ ಮೂಲಕ ಕಾರ್ಖಾನೆ, ಷೇರುದಾರರು, ಕಬ್ಬು ಬೆಳೆಗಾರರು, ನೌಕರರನ್ನು ಉಳಿಸಿಕೊಳ್ಳುವಲ್ಲಿ ಯಶ್ವಸಿಯಾಗಿದ್ದೇವೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ತಾಲೂಕಿನ ಶ್ರೀನಿವಾಸಪುರದಲ್ಲಿ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸೋಮವಾರ ಷೇರುದಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸದ್ಯ 32 ಕೋಟಿ ರೂ. ಗುತ್ತಿಗೆ ಹಣ ವಿವಿಧ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲಾಗಿದೆ. ಚಾಮುಂಡೇಶ್ವರಿ ಶುಗರ್ಸ್‌ನಿಂದ ಬಾಕಿ ಬರಬೇಕಾಗಿರುವ 17 ಕೋಟಿ ರೂ. ಮತ್ತು ಬಡ್ಡಿಯ ವಸೂಲಿಗೆ ಕ್ರಮವಹಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 2.75 ಲಕ್ಷ ಟನ್ ಕಬ್ಬು ನುರಿಯಲಾಗಿದ್ದು, 1.25 ಲಕ್ಷ ಟನ್ ಕಬ್ಬು ಬಾಕಿಯಿದ್ದು, ಮುಂದಿನ 40 ದಿನದೊಳಗೆ ಸಂಪೂರ್ಣ ಕಬ್ಬು ಅರೆಯಲಾಗುವುದು ಎಂದರು.

ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಲಾಭಾಂಶದಲ್ಲಿ 26 ಸಾವಿರ ಷೇರುದಾರರಿಗೆ ತಲಾ 25 ಕೆಜಿ ಸಕ್ಕರೆ ನೀಡುವ ಕುರಿತಾಗಿ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ ಎಂದು ಸಕ್ಕರೆ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗಿದೆ. ಈ ಬಾರಿಯೂ ಷೇರುದಾರರಿಗೆ ಸಕ್ಕರೆ ನೀಡಲಾಗುವುದು. ಕಾರ್ಖಾನೆಯ ಲಾಭಾಂಶದಲ್ಲಿ ಷೇರುದಾರರಿಗೆ ಸಕ್ಕರೆ ವಿತರಣೆಯ ಕ್ರಮವನ್ನು ರಾಜ್ಯ ಸಕ್ಕರೆ ನಿರ್ದೇಶನಾಲಯ ವಿರೋಧ ವ್ಯಕ್ತಪಡಿಸಿದೆ. ಆದಾಗ್ಯೂ ಸಭೆಯಲ್ಲಿ ಷೇರುದಾರರಿಂದ ಅನುಮೋದನೆ ಪಡೆದು ಸರ್ಕಾರದ ಗಮನಕ್ಕೆ ತಂದು ಸಕ್ಕರೆ ವಿತರಣೆಗೆ ಕ್ರಮ ವಹಿಸಲಾಗುವುದು ಎಂದರು.

ಮರಣನಿಧಿ ಸ್ಥಾಪನೆ: ಷೇರುದಾರರಿಗೆ ಮರಣನಿಧಿ ಸ್ಥಾಪಿಸುವಂತೆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾದ ಹಿನ್ನಲೆಯಲ್ಲಿ ಷೇರುದಾರರು ಸಕ್ಕರೆ ಕೇಳಿದ್ದಾರಾ? ಮರಣನಿಧಿಯ ಕುರಿತು ಪರಿಶೀಲನೆ ಮಾಡಿ. ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಕಬ್ಬು ಬೆಳೆಗಾರರ ಹಿತದಿಂದಾಗಿ ಅಣ್ಣೆಕಟ್ಟು ನಾಲೆಯಾಗಿರುವ ಶ್ರೀರಾಮದೇವರ ನಾಲೆಗೆ 300 ಕ್ಯೂಸೆಕ್ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳೊಂದಿಗೆ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗುವುದು ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಬಿ.ಜೆ.ಕೃಷ್ಣೇಗೌಡ, ನಿರ್ದೇಶಕರಾದ ಎನ್.ಸಿ.ನಾರಾಯಣಗೌಡ, ಬಿ.ಸಿ.ಮಂಜುನಾಥ್, ಬಿ.ಎಲ್. ತೇಜಸ್ವಿ ಕಿರಣ್, ಕೆ.ಎಂ.ಜಯರಾಂ, ಎಚ್.ಎನ್.ದೇವೇಗೌಡ, ಎಸ್.ಕೆ.ಶಿವಣ್ಣ, ರವೀಶ್ , ಮುತ್ತಿಗೆ ನಾರಾಯಣಗೌಡ, ವ್ಯವಸ್ಥಾಪಕ ನಿರ್ದೇಶಕ ಜೆ.ವಿಕ್ರಂರಾಜ ಅರಸ್ ಸೇರಿದಂತೆ ಇತರ ನಿರ್ದೇಶಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net