ಕಬ್ಬಿಗೆ 5,500 ರೂ ನಿಗದಿಗೊಳಿಸಲು ಒತ್ತಾಯ: ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರ ಪ್ರತಿಭಟನೆ

Sugarcane Growers Association protest Mandya
Published on

ಮಂಡ್ಯ: ಪ್ರತಿ ಟನ್ ಕಬ್ಬಿಗೆ 5,500 ರೂ ಬೆಲೆ ನಿಗದಿ ಮಾಡಬೇಕು. ದುಬಾರಿ ಕಟಾವು ಮತ್ತು ಸಾಗಾಣಿಕೆ ವೆಚ್ಚದ ಮೇಲೆ ನಿಯಂತ್ರಣ ಮಾಡಬೇಕು. ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಹಣ ಪಾವತಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಕಾರ್ಯಕರ್ತರು, ಸಕ್ಕರೆ ಇಳುವರಿ ತಿಳಿಸುವುದು ಮತ್ತು ತೂಕದಲ್ಲಿ ನಡೆಯುವ ಮೋಸ ತಡೆಗಟ್ಟುವಂತೆ ಘೋಷಣೆ ಕೂಗಿದರು. ದೇಶದಲ್ಲಿ ಸುಮಾರು ಐದು ಕೋಟಿ ರೈತರು ಕಬ್ಬು ಬೆಳೆಯುತ್ತಾರೆ. ಕರ್ನಾಟಕ ಕಬ್ಬು ಬೆಳೆಯುವುದರಲ್ಲಿ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಕರ್ನಾಟಕದಲ್ಲಿ ಮಂಡ್ಯ ಜಿಲ್ಲೆ ಅತಿ ಹೆಚ್ಚು ಕಬ್ಬು ಬೆಳೆಯುವ ಮೂಲಕ ಸಕ್ಕರೆ ನಾಡು ಎಂಬ ಕೀರ್ತಿಗೆ ಪಾತ್ರವಾಗಿದೆ. ಈ ನಡುವೆಯೇ ಮಂಡಿಯುದ್ದ ಕಬ್ಬು ಎದೆ ಉದ್ದ ಸಾಲ ಎಂಬ ಅಪಕೀರ್ತಿಯನ್ನು ನಮ್ಮ ರೈತರು ಪಡೆದುಕೊಂಡಿದ್ದಾರೆ. ಇವರ ನೆರವಿಗೆ ಸರ್ಕಾರ ಬರಬೇಕು ಎಂದು ಒತ್ತಾಯಿಸಿದರು.

ಆಯುಕ್ತರು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರು ಮಾರ್ಗದರ್ಶನದಂತೆ ಟನ್ ಕಬ್ಬಿಗೆ ಕಟಾವು ವೆಚ್ಚ ಮತ್ತು ಸಾಗಾಣಿಕೆ ವೆಚ್ಚವನ್ನು ಪ್ರಾರಂಭದಿಂದ ಕೊನೆವರೆಗೂ ಒಂದೇ ರೀತಿಯಲ್ಲಿ ಇರಬೇಕು. ಇದರ ಉಸ್ತುವಾರಿಯನ್ನು ಆಡಳಿತ ಮಂಡಳಿ ನೋಡಿಕೊಳ್ಳಬೇಕು. ಸಕ್ಕರೆ ಆಡಳಿತ ಮಂಡಳಿ ಹಾಗೂ ಕಬ್ಬು ಬೆಳೆಗಾರರ ಮುಖಂಡರ ಸಭೆಯನ್ನು ಜಿಲ್ಲಾಧಿಕಾರಿ ಅವರು ಕಾರ್ಖಾನೆ ಆರಂಭಕ್ಕೂ ಮುನ್ನ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರಿಗೆ ಉಚಿತವಾಗಿ ಮಡ್ಡಿ ಮತ್ತು ಬೂದಿಯನ್ನು ಸಹ ನೀಡುವುದರ ಜತೆಗೆ ಬೆಳೆಗಾರರಿಗೆ ಟನ್‌ಗೆ ಒಂದು ಕೆಜಿಯಂತೆ ಸಕ್ಕರೆಯನ್ನು ಉಚಿತವಾಗಿ ನೀಡಬೇಕು. ಕೇಂದ್ರದ ಸಕ್ಕರೆ ಅಭಿವೃದ್ಧಿ ಮಂಡಳಿಯವರು ಬೇಸಿಗೆಯಲ್ಲಿ ಕಬ್ಬು ಬೆಳೆಯುವ ರೈತರಿಗೆ ಎಕರೆಗೆ 10 ಸಾವಿರ ರೂ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರದ ಆದೇಶದಂತೆ ಕರ್ನಾಟಕ ಕಬ್ಬು ಖರೀದಿ ಮತ್ತು ಸರಬರಾಜು ನಿಂತ್ರಣ ಅಧಿನಿಯಮ 2013 ಹಾಗೂ ತಿದ್ದುಪಡಿ ಅಧಿನಿಯಂ 2014ರ ಕಲಂ ಎಥೆನಾಲ್ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳು ಟನ್‌ಗೆ 150 ರೂ ಬಾಕಿ ಹಣ ನೀಡಬೇಕು. ಕಬ್ಬು ಸರಬರಾಜು ಮಾಡಲು ಮತ್ತು ಕೊಳ್ಳಲು ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಯುವ ರೈತರ ನಡುವೆ ದ್ವಿಪಕ್ಷೀಯ ಒಡಂಬಡಿಕೆ ಪತ್ರಕ್ಕೆ ಇಬ್ಬೂ ಸಹಿ ಹಾಕಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್‌ರಾಜ್, ಕುಳ್ಳೇಗೌಡ, ಸತೀಶ್, ರಘುನಾಥ್, ನಾಗೇಂದ್ರ, ಶ್ರೀನಿವಾಸ್, ಲಿಂಗರಾಜುಮೂರ್ತಿ, ಸಿದ್ದೇಗೌಡ, ವಿಶ್ವನಾಥ್, ಗುರುಸ್ವಾಮಿ, ಮುತ್ತುರಾಜ್, ನಂಜುಂಡಸ್ವಾಮಿ, ಚಿಕ್ಕರಾಚಯ್ಯ, ಕೆ.ಎನ್.ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net