

ಮಂಡ್ಯ: ರೈತ ವಿರೋಧಿ 2024ರ ಸಕ್ಕರೆ ನಿಯಂತ್ರಣ ಮಂಡಳಿ ಆದೇಶವನ್ನು ಹಿಂಪಡೆಯಬೇಕು. ಜತೆಗೆ ಕೇಂದ್ರ ಸರ್ಕಾರ 9.5ರಷ್ಟು ಸಕ್ಕರೆ ಇಳುವರಿ ಆಧಾರದಲ್ಲಿ ಪ್ರತಿ ಟನ್ ಕಬ್ಬಿಗೆ 5,500 ರೂ ಎಫ್‌ಆರ್‌ಪಿ ಬೆಲೆ ನಿಗದಿಪಡಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್‌ರಾಜ್ ಒತ್ತಾಯಿಸಿದರು.
ಹರಿಯಾಣ ಮತ್ತು ಪಂಜಾಬ್ ಮಾದರಿಯಲ್ಲಿ ಕರ್ನಾಟಕದಲ್ಲೂ ಕೂಡ ಪ್ರತಿ ಟನ್ ಕಬ್ಬಿಗೆ 900 ರೂ ರಾಜ್ಯ ಸಲಹಾ ದರ(ಎಸ್‌ಎಪಿ) ನೀಡಬೇಕು. ರೆವಿನ್ಯೂ ಶೇರಿಂಗ್ ಫಾರ್ಮುಲಾ ರದ್ಧುಪಡಿಸಿ, ಉಪ ಉತ್ಪನ್ನಗಳ ಲಾಭಾಂಶದದಲ್ಲಿ ಶೇ.50ರಷ್ಟು ಪಾಲನ್ನು ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡುವಂತೆ ಆದೇಶಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕಲಬುರಗಿಯಲ್ಲಿ ಸೆ.20 ಮತ್ತು 30ರಂದು ನಡೆದಕಬ್ಬು ಬೆಳೆಗಾರರ ಸಂಘದ ರಾಜ್ಯ ಸಮ್ಮೇಳನದಲ್ಲಿ 13 ನಿರ್ಣಯ ಅಂಗೀಕರಿಸಲಾಗಿದೆ. ಕಬ್ಬು ತೂಕವನ್ನು ಪರೀಕ್ಷಿಸಲು ಕಬ್ಬು ಬೆಳೆಗಾರರು/ಮುಖಂಡರನ್ನು ಒಳಗೊಂಡ ಸಮಿತಿ ರಚಿಸಬೇಕು. ಮಾಹಿತಿ ನೀಡದೆ ಕಾರ್ಖಾನೆಗಳಿಗೆ ಭೇಟಿ ನೀಡಿ ಪರೀಕ್ಷಿಸಲು ಅವಕಾಶ ಕಲ್ಪಿಸಬೇಕು. ಸಕ್ಕರೆ ಇಳುವರಿ ಘೋಷಣೆಯಲ್ಲಿ ಕಾರ್ಖಾನೆಯವರು ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆ ತೋರುತ್ತಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಪಡಿಸಿದರು.
ಸಹಕಾರ ಮತ್ತು ಸಾರ್ವಜನಿಕ ಕಾರ್ಖಾನೆಗಳ ಪುನಶ್ಚೇತನ ಕೇಂದ್ರ, ಸಕ್ಕರೆ ಅಭಿವೃದ್ಧಿ ಮಂಡಳಿಯಿಂದ ಬಡ್ಡಿರಹಿತ ಸಾಲ ನೀಡಬೇಕು. 30 ರಿಂದ 40 ವರ್ಷ ಗುತ್ತಿಗೆ ನೀಡುವ ಅಥವಾ ಮಾರಾಟ ಮಾಡುವ ಪ್ರೌವೃತ್ತಿಯನ್ನು ಕೈಬಿಡಬೇಕು. ಕಬ್ಬು ಸರಬರಾಜು ಮಾಡಿದ 14 ದಿನದಲ್ಲಿ ರೈತರಿಗೆ ಹಣ ಪಾವತಿಸಬೇಕು. ಇಲ್ಲವಾದರೆ ಶೇ.15ರಷ್ಟು ಬಡ್ಡಿ ನೀಡಬೇಕು. ಅದನ್ನೂ ಕೊಡದಿದ್ದರೆ ಕಾರ್ಖಾನೆ ಆಡಳಿತ ಮಂಡಳಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದರು.
ಪದಾಧಿಕಾರಿಗಳ ಆಯ್ಕೆ: ಕಲಬುರಗಿಯಲ್ಲಿ ನಡೆದ ಸಮ್ಮೇಳನದಲ್ಲಿ ಸಂಘವನ್ನು ಪುನರ್ ರಚಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅದರಂತೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್‌ರಾಜ್, ರಾಜ್ಯ ಉಪಾಧ್ಯಕ್ಷರಾಗಿ ಮಂಡ್ಯದ ಕುಳ್ಳೇಗೌಡ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ಕುಳ್ಳೇಗೌಡ, ಸದಸ್ಯರಾದ ಶ್ರೀನಿವಾಸ್, ಶುಕೂರ್, ಪ್ರಾಂತ ರೈತಸಂಘದ ಎನ್.ಲಿಂಗರಾಜಮೂರ್ತಿ, ಚಿಕ್ಕತಮ್ಮೇಗೌಡ, ರಾಮಕೃಷ್ಣಪ್ಪ, ಕೆಂಪರಾಜು, ಸೊ.ರಾ.ಶಿವರಾಂ, ಎಸ್.ವಿಜಯೇಂದ್ರ ಹಾಜರಿದ್ದರು.