ಟನ್ ಕಬ್ಬಿಗೆ 5 ಸಾವಿರ ರೂ ನಿಗದಿಪಡಿಸಿ: ಕಬ್ಬು ಬೆಳೆಗಾರರ ಸಂಘದ ಸಂಚಾಲಕ ಎನ್.ಎಲ್.ಭರತ್‌ರಾಜ್ ಆಗ್ರಹ

Sugarcane Growers Association press conference Mandya
Published on

ಮಂಡ್ಯ: ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಪ್ರತಿ ಟನ್ ಕಬ್ಬಿಗೆ ಕೇಂದ್ರ ಸರ್ಕಾರ 5000 ರೂ ಎಫ್‌ಆರ್‌ಪಿ ದರ ನಿಗದಿಪಡಿಸಬೇಕು. ಅಂತೆಯೇ ರಾಜ್ಯ ಸರ್ಕಾರ ಪ್ರತಿ ಟನ್‌ಗೆ 500 ರೂ ಎಸ್‌ಎಪಿ ದರ ನೀಡಬೇಕೆಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್.ಎಲ್.ಭರತ್‌ರಾಜ್ ಆಗ್ರಹಿಸಿದರು.

ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ದ್ರೋಹ ಬಗೆಯುತ್ತಿವೆ. ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಚಿವರು, ಶಾಸಕರು, ಸಂಸದರಾಗಿರುವುದರಿಂದ ಕಬ್ಬಿಗೆ ಸರಿಯಾಗಿ ಬೆಲೆ ನಿಗದಿಯಾಗುತ್ತಿಲ್ಲ. ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸರ್ಕಾರಗಳು ಶಾಮೀಲಾಗಿವೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

1994-95ರಲ್ಲಿ ಕಬ್ಬಿಗೆ ಬೆಲೆ ನಿಗದಿಪಡಿಸುವಾಗ ಶೇ.8.5ರಷ್ಟು ಇಳುವರಿ ಆಧರಿಸಲಾಗುತ್ತಿತ್ತು. ಬಳಿಕ ಶೇ.9.5ರಷ್ಟು ಇಳುವರಿ ಆಧರಿಸಿ ಬೆಲೆ ನಿಗದಿ ಪ್ರಕ್ರಿಯೆ ಆರಂಭವಾಯಿತು. ಇದೀಗ ಸಕ್ಕರೆ ಉದ್ಯಮಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತದಲ್ಲಿ ಪ್ರಬಲರಾದಂತೆ ಎಫ್‌ಆರ್‌ಪಿ ನಿಗದಿಪಡಿಸಲು ಇಳುವರಿಯ ಮಾನದಂಡವನ್ನು ಶೇ.10.25ರಷ್ಟಕ್ಕೆ ಅಂತಿಮಗೊಳಿಸಿದ್ದಾರೆ. ಇದು ಕಬ್ಬು ಬೆಳೆಗಾರರಿಗೆ ಮಾಡಿರುವ ಮಹಾದ್ರೋಹ ಎಂದು ಕಿಡಿಕಾರಿದರು.

2024-25ನೇ ಸಾಲಿನಲ್ಲಿ ಎಫ್‌ಆರ್‌ಪಿ ದರವನ್ನು ಪ್ರತಿ ಟನ್ ಕಬ್ಬಿಗೆ ಶೇ.9.5ರಷ್ಟು ಇಳುವರಿ ಆಧಾರದ ಮೇಲೆ 3,150 ರೂ., ಶೇ.10.25ರಷ್ಟು ಇಳುವರಿಗೆ 3,400 ರೂ ನಿಗದಿಪಡಿಸಲಾಗಿದೆ. ಆದರೆ, ಜಿಲ್ಲೆಯ ಬಹುತೇಕ ಎಲ್ಲ ಕಾರ್ಖಾನೆಗಳಲ್ಲಿನ ಸಕ್ಕರೆ ಇಳುವರಿ ಕೇವಲ ಶೇ.9.5ರಷ್ಟೇ ಇದೆ. ಇಳುವರಿ ಘೋಷಣೆಯ ಸತ್ಯಾಂಶದಲ್ಲಿ ಅನುಮಾನವಿದೆ. ಜತೆಗೆ, ತೂಕದಲ್ಲೂ ಸಹ ಮೋಸ ನಡೆಯುತ್ತಿರುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಆದ್ದರಿಂದ ಸಕ್ಕರೆ ಇಳುವರಿ ಮತ್ತು ತೂಕ ಪರೀಕ್ಷಿಸಲು ಜಿಲ್ಲಾಡಳಿತ ತಜ್ಞರು ಮತ್ತು ರೈತ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಬೇಕು. ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರು ನಿಗದಿಪಡಿಸಿರುವ ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನಷ್ಟೇ ಕಾರ್ಖಾನೆಯವರು ಕಡಿತ ಮಾಡಬೇಕು. ನಿಗದಿಗಿಂತ ಹೆಚ್ಚುವರಿಯಾಗಿ ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಡಿತಗೊಳಿಸುವ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು. ಉಪ ಉತ್ಪನ್ನಗಳ ಲಾಭಾಂಶ ಆಧರಿಸಿ ಎಸ್‌ಎಪಿ ದರ ನಿಗದಿಪಡಿಸಬೇಕು. ಕೇಂದ್ರದ ಎಫ್‌ಆರ್‌ಪಿ ದರದ ಜತೆಗೆ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹಧನ ಕೊಡಬೇಕು ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರ ಸಂಘದ ಮುಖಂಡರಾದ ಟಿ.ಆರ್.ಸಿದ್ದೇಗೌಡ, ಮರಿಲಿಂಗೇಗೌಡ, ಚಾಂಷುಗರ್ ವ್ಯಾಪ್ತಿಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುಳ್ಳೇಗೌಡ, ಕಾರ್ಯದರ್ಶಿ ಸತೀಶ್, ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾ ಸಹ ಸಂಚಾಲಕರಾದ ಎನ್.ಲಿಂಗರಾಜಮೂರ್ತಿ, ಎಸ್.ವಿಶ್ವನಾಥ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net