ಕಬ್ಬಿನ ದರಕ್ಕಾಗಿ ಕಲಬುರಗಿಯಲ್ಲಿ ಅಹೋರಾತ್ರಿ ಧರಣಿ: ರಸ್ತೆಯಲ್ಲಿ ಊಟ, ಭಜನೆ

ಕಬ್ಬಿನ ದರಕ್ಕಾಗಿ ಕಲಬುರಗಿಯಲ್ಲಿ ಅಹೋರಾತ್ರಿ ಧರಣಿ: ರಸ್ತೆಯಲ್ಲಿ ಊಟ, ಭಜನೆ
Published on: 

ಕಲಬುರಗಿ: ಕ್ವಿಂಟಾಲ್​ ಕಬ್ಬಿಗೆ 5,500 ರೂ. ಬೆಲೆ ನಿಗದಿಪಡಿಸಬೇಕು, ಪ್ರತಿ ಕೆಜಿ ಸಕ್ಕರೆಗೆ 60 ರೂ. ಎಂಎಸ್​ಪಿ ನಿಗದಿ ಪಡಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಗರದಲ್ಲಿ ರಾಜ್ಯ ರೈತ ಸಂ, ಹಸಿರು ಸೇನೆ, ಕಬ್ಬು ಬೆಳೆಗಾರರಿಂದ ಹೆದ್ದಾರಿ ತಡೆದು ಅರ್ನಿಧಿಷ್ಠಾವಧಿ ಧರಣಿ ಆರಂಭಿಸಿದ್ದು,

ನಗರದ ರಾಮ ಮಂದಿರ ವೃತ್ತದಲ್ಲಿ ಮಂಗಳವಾರ ನೂರಾರು ರೈತರು ಸೇರಿ ನಗರಕ್ಕೆ ಸಂಪರ್ಕಿಸುವ ಶ್ರೀರಂಗಪಟ್ಟಣ, ಬೀದರ್​ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್​ ಮಾಡಿ, ರಸ್ತೆ ಮೇಲೆಯೇ ಕುಳಿತು ಹೋರಾಟ ಆರಂಭಿಸಿದರು. ಕಬ್ಬಿನ ಗೂಡು ಕಟ್ಟಿ, ಹೂವಿನ ಹಾರ ಹಾಕಿ, ಹೋರಾಟ ಆರಂಭಿಸಿದ್ದು, ಇಡೀ ರಾಮ ಮಂದಿರ ವೃತ್ತ ಪೊಲೀಸರು, ರೈತರಿಂದ ಆವೃತ್ತವಾಗಿತ್ತು

ಬೆಳಗ್ಗೆಯಿಂದಲೇ ಒಬ್ಬೊಬ್ಬರಾಗಿ ಆಗಮಿಸಿದ ರೈತರು ಮಧ್ಯಾಹ್ನದ ಹೊತ್ತಿಗೆ ನೂರಾರು ಜನರು ಸೇರಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ ಇಡೀ ಭಜನೆ, ರಸ್ತೆಯಲ್ಲೇ ಊಟ ಸೇವಿಸಲಾಯಿತು.

ಈ ವೇಳೆ ಮಾತನಾಡಿದ ರೈತ ಮುಖಂಡ ಜಗದೀಶ ಪಾಟೀಲ್​ ರಾಜಾಪುರ, ಕಬ್ಬಿನ ದರ ಕ್ವಿಂಟಾಲ್​ ಗೆ 5500 ರೂ. ಬೆಲೆ ನಿಗದಿ ಮಾಡಬೇಕು, ತೊಗರಿಗೆ 15000, ಭತ್ತ 7,500, ಮೆಣಸಿನಕಾಯಿ 30 ಸಾವಿರ ರೂ, ಹತ್ತಿ 15 ಸಾವಿರ ರೂ. ನೀಡಬೇಕು ಎಂದು ಮನವಿ ಮಾಡಲಾಗುತ್ತಿದೆ. ಸರ್ಕಾರ ಸಭೆಯ ನೆಪದಲ್ಲಿ ರೈತರನ್ನು ದಾರಿ ತಪ್ಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಶಿವಾನಂದ ಮಾತನಾಡಿದರು. ಸಿದ್ದರಾಮ ದಣ್ಣೂರ, ಶರಣಬಸಪ್ಪ ಮಮಶೆಟ್ಟಿ, ಜೇವರ್ಗಿಯ ಮಲ್ಲಣ್ಣಗೌಡ, ರೈತ ಶಿವಾನಂದ, ಬಸವರಾಜಪ್ಪ ಕೋರಿ, ಸುಖೇಶ ರೆಡ್ಡಿ ಜೈನಾಪುರ ಇತರರಿದ್ದರು.

ಕಬ್ಬು ಬೆಳೆಗಾರರ ಪ್ರಮುಖ ಬೇಡಿಕೆಗಳು

ಸಕ್ಕರೆಗೆ ಪ್ರತಿ ಕೆ.ಜಿ.ಗೆ 60 ರೂ. ಎಂಎಸ್​ಪಿ ನಿಗದಿವಡಿಸಬೇಕು.

ಗೃಹ ಬಳಕೆಯ ಸಕ್ಕರೆಗೆ 50, ವಾಣಿಜ್ಯ ಬಳಕೆ ಸಕ್ಕರೆಗೆ 100 ರೂ. ದರ ನಿಗದಿಪಡಿಸಬೇಕು

ಕರ್ನಾಟಕದಲ್ಲಿ ಎಥನಾಲ್​ ಉತ್ಪಾದನೆಗೆ ಪೂರ್ಣ ಪ್ರಮಾಣದ ಅನುಮತಿ ನೀಡಬೇಕು.

ದೇಶದ ಎಲ್ಲ ಪ್ರತಿಪಕ್ಷಗಳು ಎಥನಾಲ್​ ಉತ್ಪಾದನೆಗೆ ವಿರೋಧ ವ್ಯಕ್ತಪಡಿಸಬಾರದು.

ಸಕ್ಕರೆ ಕಾರ್ಖಾನೆಗಳಲ್ಲಿ ಡಿಜಿಟಲ್​ ತೂಕ, ಸಿಸಿಟಿವಿ ಅಳವಡಿಸಿ, ಡಿಸಿ ಮೇಲ್ವಿಚಾರಣೆ ನಡೆಸಬೇಕು

ರಾಜ್ಯ ಸರ್ಕಾರ ಎಸ್​ಎಪಿ ಮೂಲಕ ಪ್ರತಿ ಟನ್​ ಕಬ್ಬಿಗೆ 1,000 ರೂ. ಪ್ರೋತ್ಸಾಹಧನ ನೀಡಬೇಕು

ತೂಕದ ಸೇತುವೆಗಳಿಗೆ ಹೆಚ್ಚುವರಿ 1400 ಕೋಟಿ ರೂ. ಅನುದಾನ ಮೀಸಲಿಡಬೇಕು.

ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 15 ಟಿಎಂಸಿ ನೀರು ಬಿಡುಗಡೆ ಮಾಡಿಸಬೇಕು.

ಅಫಜಲಪುರ ತಾಲೂಕಿನ ಎಲ್ಲ ಕಾಲುವೆಗಳ ಕೊನೆ ಹಂತದವರೆಗೂ ನೀರು ಹರಿಸಬೇಕು.​

ಹೆದ್ದಾರಿ ಬಂದ್​, ಪೊಲೀಸ್​ ಸಾಥ್​

ರಾಜ್ಯ ರೈತ ಸಂ ಹಾಗೂ ಹಸಿರು ಸೇನೆಯಿಂದ ಹಮ್ಮಿಕೊಂಡ ರಾಷ್ಟ್ರೀಯ ಹೆದ್ದಾರಿ ಬಂದ್​ ಪ್ರತಿಭಟನೆಗೆ ಇಡೀ ರಾಮ ಮಂದಿರ ವೃತ್ತ ಸ್ಥಬ್ಧವಾಗಿದ್ದು, ಎಲ್ಲೆಡೆ ಪೊಲೀಸರು ಬಿಗಿ ಬಂದೋಬಸ್ತ್​ ಕೈಗೊಂಡರು. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಹೆದ್ದಾರಿಗೆ ಬರಬಹುದಾದ ಎಲ್ಲ ಬಸ್​, ವಾಹನಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿತ್ತು. ಪೊಲೀಸರು ಹೋರಾಟಗಾರರಿಗೆ ಯಾವುದೇ ತೊಂದರೆ ನೀಡದೇ ಸಹಕಾರ ನೀಡಿದರು.

​ನೆಲವೇ ಹಾಸಿಗೆ, ರಸ್ತೆಯಲ್ಲೇ ಊಟ

ನೂರಾರು ರೈತರು ಬಿರು ಬಿಸಿಲಿನಲ್ಲಿ ಹೋರಾಟ ನಡೆಸಿದ್ದು, ಹೆದ್ದಾರಿಯಲ್ಲೇ ನೆಲಹಾಸು ಹಾಸಿ ಪಟ್ಟು ಹಿಡಿದು ಕುಳಿತರು. ರಸ್ತೆಯಲ್ಲಿಯೇ ಮಧ್ಯಾಹ್ನದ, ಸಂಜೆಯ ಊಟವನ್ನು ತರಿಸಿ, ಅಲ್ಲೇ ಊಟ ಮಾಡಿದರು. ಕೆಲವು ದಾನಿಗಳು ಬಿಸಿಲ ಬೇಗೆಗೆ ತಡೆದುಕೊಳ್ಳಲಿ ಎಂದು ಟೋಪಿ ವಿತರಿಸಿದರೆ, ನೀರು, ಊಟದ ಸಹಕಾರವನ್ನು ರೈತರಿಗೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net