ರೈತರನ್ನು ವಶಕ್ಕೆ ಪಡೆದ ಪೊಲೀಸರು: ಟೆಂಟ್​ ತೆರವು, ಪ್ರತಿಭಟನೆ ನಿರಂತರ

ರೈತರನ್ನು ವಶಕ್ಕೆ ಪಡೆದ ಪೊಲೀಸರು: ಟೆಂಟ್​ ತೆರವು, ಪ್ರತಿಭಟನೆ ನಿರಂತರ
Published on: 

ಕಲಬುರಗಿ: ನಗರದ ರಾಮ ಮಂದಿರ ವೃತ್ತದ ಬಳಿ ಟನ್​ ಕಬ್ಬಿಗೆ 5,500 ರೂ. ದರ ನಿಗದಿ ಹಾಗೂ ಸ್ವಾಮಿನಾಥನ್​ ವರದಿ ಜಾರಿಗೆ ಆಗ್ರಹಿಸಿ ರೈತರು ನಡೆಸುತ್ತಿದ್ದ ಹೋರಾಟದ ಟೆಂಟ್​ನ್ನು ಶುಕ್ರವಾರ ತೆರವುಗೊಳಿಸಿದ ಪೊಲೀಸರು, ರೈತ ಹೋರಾಟಗಾರರನ್ನು ವಶಕ್ಕೆ ಪಡೆದಿದ್ದು, ಹೆದ್ದಾರಿ ಪಕ್ಕ ಪ್ರತಿಭಟನೆ ಮುಂದುವರಿದಿದೆ.

ನಾಲ್ಕು ದಿನದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆಯಿಂದ ಹಾಕಿದ್ದ ಟೆಂಟ್​ನ್ನು ತೆರವುಗೊಳಿಸಿದ ಪೊಲೀಸರ ಕ್ರಮ ಖಂಡಿಸಿ ರೈತರು ರಸ್ತೆ ಮೇಲೆ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರೈತ ಮುಖಂಡರಾದ ಸಿದ್ದರಾಮ ಡಣ್ಣೂರು, ಬಸವರಾಜ ಕೋರಿ, ಮಲ್ಲಿಕಾರ್ಜುನ ಸಾರವಾಡ್​ ಸೇರಿ ಒಂಬತ್ತು ಹೋರಾಟಗಾರರನ್ನು ವಶಕ್ಕೆ ಪಡೆದರು. ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟ ಪೊಲೀಸರು ರಸ್ತೆ ಬದಿ ಟೆಂಟ್​ ಹಾಕಿಕೊಂಡು ಪ್ರತಿಭಟನೆ ಮುಂದುವರಿಸಲು ಅವಕಾಶ ನೀಡಿದ್ದು, ಹೋರಾಟ ಮುಂದುವರಿಸಿದರು.

ರೈತರ ಹೋರಾಟಕ್ಕೆ ವಿವಿಧ ಸಂಟನೆಗಳ ಸಾಥ್​: ಶುಕ್ರವಾರ ಇಡೀ ದಿನ ಹಲವು ಸ್ವಾಮೀಜಿಗಳು, ರೈತ, ದಲಿತ, ವಿದ್ಯಾರ್ಥಿ ಸಂಟನೆಗಳು, ಸಾರ್ವಜನಿಕರು ಭಾಗವಹಿಸಿ, ಬೆಂಬಲಿಸಿದರು. ಹೋರಾಟಕ್ಕೆ ದಲಿತ ಸೇನೆ, ವಿಜಯಸೇನೆ ಹಾಗೂ ಕಾನೂನು ವಿದ್ಯಾರ್ಥಿಗಳು ಸಾಥ್​ ನೀಡಿದರು.

ವಿಜ್ಞಾನೇಶ್ವರ ಕಾಲೇಜಿನ ವಿದ್ಯಾರ್ಥಿನಿಯರಾದ ಮಲ್ಲಿಕಾ, ಅಂಜನಾ, ಅಂಕಿತಾ ಹಾಗೂ ವಿಜಯಲಕ್ಷಿ$್ಮ ಭಾಗವಹಿಸಿ, ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶ್ರೀಶೈಲಂ ಸಾರಂಗಮಠದ ಡಾ. ಶ್ರೀ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ರಾಜ್ಯ ರೈತ ಸಂದ ಕಾರ್ಯಾಧ್ಯಕ್ಷ ಮಹೇಶ ಸುಬೇದಾರ್​, ಜಿಲ್ಲಾ ಕಾರ್ಯದರ್ಶಿ ಸಿದ್ದರಾಮ್​ ದಣ್ಣೂರು, ಯಾದಗಿರಿ ಜಿಲ್ಲಾಧ್ಯಕ್ಷ ವಿಜಯಕುಮಾರ್​ ಮುಷ್ಟೂರು, ಶರಣಪ್ಪ ಮಮಶೆಟ್ಟಿ, ಸಿದ್ದು ಎಸ್​.ಎಲ್​, ಕರೆಪ್ಪ ಕರಗೊಂಡ, ಜಗದೇಶ ಪಾಟೀಲ್​ ರಾಜಾಪುರ, ಅಶೋಕ ಹೂಗಾರ, ಬಸವರಾಜ ಚಾನಕೋಟೆ, ಬಸವರಾಜ ಕೋರಿ, ಶರಣಗೌಡ ಮಾಲಿಪಾಟೀಲ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net