ಶೀಘ್ರ ಕಬ್ಬು ಅರೆಯುವ ಕಾರ್ಯ ಆರಂಭ

ಕೆ.ಆರ್.ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ 40 ಲಕ್ಷ ರೂ.ಗಳ ಕಾಂಕ್ರಿಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಡಿ.ರವಿಶಂಕರ್ ಮಾತನಾಡಿದರು. ಮಂಜುಳಾ ಶ್ರೀನಿವಾಸ್, ಎಂ.ಎಸ್.ಮಹದೇವ್, ಉದಯಶಂಕರ್, ಸೈಯದ್ ಜಾಬೀರ್ ಇತರರಿದ್ದರು.
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಕೆ.ಆರ್.ನಗರ: ಸಾಲಿಗ್ರಾಮ ತಾಲೂಕು ಚುಂಚನಕಟ್ಟೆಯ ಶ್ರೀ ರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಸರ್ಕಾರದಿಂದ 40 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿರುವ ನಿರಾಣಿ ಶುಗರ್ಸ್‌ನವರು ಫೆ.25ರಂದು ಗುತ್ತಿಗೆ ಕರಾರು ನೋಂದಣಿ ಮಾಡಿಸಿದ್ದು, ಶೀಘ್ರದಲ್ಲೇ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ಸಿಗಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ 40 ಲಕ್ಷ ರೂ.ಗಳ ಕಾಂಕ್ರೀಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ರೈತರು ಮತ್ತು ಕಬ್ಬು ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಕಾರ್ಖಾನೆ ಪುನರಾರಂಭಿಸಲಾಗುತ್ತಿದೆ ಎಂದರು.

ಕಬ್ಬು ಬೆಳೆಯುವುದರಿಂದ ರೈತರಿಗೆ ಆರ್ಥಿಕ ಲಾಭ ಹೆಚ್ಚಾಗಲಿದ್ದು ಅದಕ್ಕಾಗಿ ಕಾರ್ಖಾನೆ ಆರಂಭಿಸಲಾಗುತ್ತಿದೆ. ಎಲ್ಲ ರೈತರು ಹೆಚ್ಚಾಗಿ ಕಬ್ಬು ಬೆಳೆಯಬೇಕು ಎಂದು ಮನವಿ ಮಾಡಿದ ಶಾಸಕ ಡಿ.ರವಿಶಂಕರ್, ಕೆಸ್ತೂರು ಏತ ನೀರಾವರಿ ಯೋಜನೆ, ಕಪ್ಪಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲು ಅಗತ್ಯ ಅನುದಾನ ಸರ್ಕಾರದಿಂದ ಮಂಜೂರು ಮಾಡಿಸಲಾಗಿದ್ದು, ಈ ಕಾಮಗಾರಿಗಳ ಜತೆಗೆ ಇತರ ಹಲವು ಕಾಮಗಾರಿಗಳಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಂದ ಮುಂದಿನ ದಿನಗಳಲ್ಲಿ ಚಾಲನೆ ಕೊಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕೆಸ್ತೂರು ಕೊಪ್ಪಲು ಗ್ರಾಮ ನನ್ನ ಕರ್ಮ ಮತ್ತು ಜನ್ಮ ಭೂಮಿಯಾಗಿದ್ದು, ಈ ಗ್ರಾಮವನ್ನು ಎಲ್ಲ ರೀತಿಯಲ್ಲೂ ಅಭಿವೃದ್ಧಿಪಡಿಸಿ ಮಾದರಿ ಗ್ರಾಮವನ್ನಾಗಿ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಗ್ರಾಮದವರೇ ಆದ, ಜಿಲ್ಲಾಧಿಕಾರಿಯಾಗಿರುವ ದಯಾನಂದ್ ಸೇರಿದಂತೆ ಉನ್ನತ್ತ ಶಿಕ್ಷಣ ಪಡೆದು ಅಧಿಕಾರದಲ್ಲಿರುವ ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಕೆಸ್ತೂರು ಕೊಪ್ಪಲು ಗ್ರಾಮಸ್ಥರು ದೊಡ್ಡಸ್ವಾಮೇಗೌಡ ಅವರ ಕುಟುಂಬಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ. ಇದಕ್ಕಾಗಿ ನಮ್ಮ ಕುಟುಂಬ ಗ್ರಾಮಸ್ಥರಿಗೆ ಆಭಾರಿಯಾಗಿರುತ್ತೇವೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀನಿವಾಸ್, ಉಪಾಧ್ಯಕ್ಷೆ ಸುಶೀಲಾ ಹರೀಶ್, ಮಾಜಿ ಅಧ್ಯಕ್ಷ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಮುಖಂಡರಾದ ಸಿ.ಟಿ.ಶಿವರಾಜು, ಕಾಳೇಗೌಡ, ರಾಮಚಾರಿ, ಶ್ರೀನಿವಾಸ್, ಚಂದ್ರು, ಮಾದಪ್ಪ, ಸುರೇಶ್, ಸತೀಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net