ಜೂನ್‌ಗೆ ಕಬ್ಬು ಅರೆಯುವಿಕೆ ಪ್ರಾರಂಭಿಸಿ

29 CRP-2A
ಚನ್ನರಾಯಪಟ್ಟಣ ತಾಲೂಕಿನ ಶ್ರೀನಿವಾಸಪುರದಲ್ಲಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆಯನ್ನು ಪ್ರಾರಂಭಿಸುವ ಕುರಿತಾಗಿ ರಾಜ್ಯ ರೈತ ಸಂಘದ ಅಧ್ಯಕ್ಷ ಹರಳಾಪುರ ಮಂಜೇಗೌಡ ಮಾತನಾಡಿದರು.
Published on

ಚನ್ನರಾಯಪಟ್ಟಣ: ತಾಲೂಕಿನ ಶ್ರೀನಿವಾಸಪುರದಲ್ಲಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆಯನ್ನು ಜೂನ್ ತಿಂಗಳಲ್ಲಿ ಪ್ರಾರಂಭಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ ಒತ್ತಾಯಿಸಿದರು.

ತಾಲೂಕಿನಲ್ಲಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಜೂನ್ ತಿಂಗಳ ಮೊದಲ ವಾರದಲ್ಲಿ ಕಬ್ಬು ಅರೆಯುವಿಕೆ ಆರಂಭಿಸಲು ಕಬ್ಬು ಅಭಿವೃದ್ಧಿ ಆಯುಕ್ತರು ಮತ್ತು ಸಕ್ಕರೆ ನಿರ್ದೇಶಕರು ಒಪ್ಪಿದ್ದಾರೆ. ಈಚೆಗೆ ಬೆಂಗಳೂರಿನಲ್ಲಿ ಕಬ್ಬು ಅಭಿವೃದ್ಧಿ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಪರಿಣಾಮ ಮಂಡ್ಯ, ಮೈಸೂರು ಮತ್ತು ಹಾಸನ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸಲು ಅವರು ಸಕರಾತ್ಮಕ ಸ್ಪಂದಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಲೂಕಿನ ರೈತರು ನಾಟಿ ಮಾಡಿರುವ ಕಬ್ಬಿನ ಬೆಳೆಗೆ ಈಗಾಗಲೇ 12 ತಿಂಗಳು ಪೂರ್ಣಗೊಂಡಿದೆ. ಕೂಡಲೇ ಅದನ್ನು ಕಟಾವು ಮಾಡದಿದ್ದರೆ ರೈತರು ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಕಬ್ಬು ಕಟಾವು ಮಾಡಲು ಇದು ಸೂಕ್ತ ಸಮಯ ಮತ್ತು ಸಕ್ಕರೆ ಇಳುವರಿ ಉತ್ತಮವಾಗಿರುತ್ತದೆ. ಇಂದಿನಿಂದಲೇ ಸಿದ್ಧತೆ ಮಾಡಿಕೊಂಡು ಜೂನ್ ಮೊದಲ ವಾರದಲ್ಲಿ ಕಬ್ಬು ಅರೆಯುವುದನ್ನು ಪ್ರಾರಂಭಿಸಬೇಕು. ಕಾರ್ಖಾನೆಯ ಆಡಳಿತ ಮಂಡಳಿ ಕೂಡಲೇ ಕಬ್ಬು ಅರೆಯುವ ದಿನಾಂಕ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಕಳೆದ ಅಕ್ಟೋಬರ್ ನಲ್ಲಿ ನಡೆದ ಕಾರ್ಖಾನೆಯ ಷೇರುದಾರರ ವಾರ್ಷಿಕ ಸಭೆಯಲ್ಲಿ ಚರ್ಚಿಸಿ ಷೇರುದಾರರಿಗೆ ತಲಾ 25 ಕೆ.ಜಿ. ಸಕ್ಕರೆ ವಿತರಿಸಲು ನಿರ್ಧರಿಸಲಾಗಿತ್ತು. ಇದುವರೆಗೆ ಷೇರುದಾರರಿಗೆ ಸಕ್ಕರೆ ವಿತರಿಸಿಲ್ಲ. ಚುನಾವಣೆಯ ನೆಪವೊಡ್ಡಿ ಸಕ್ಕರೆ ನೀಡುವುದನ್ನೂ ನಿಲ್ಲಿಸಿದರು. ಮಿನಮೇಷ ಎಣಿಸದೆ ಕೂಡಲೇ ಸಕ್ಕರೆ ವಿತರಿಸಲು ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಹಲವು ವರ್ಷಗಳಿಂದ ಕಬ್ಬು ಬೆಳೆಗಾರರ ಪರವಾಗಿ ರೈತ ಸಂಘ ಹೋರಾಟ ಮಾಡುತ್ತಿದೆ. ಪೊಲೀಸ್ ಠಾಣೆಗೆ ಕಾರ್ಖಾನೆ ವತಿಯಿಂದ ವಾಹನ ನೀಡಿರುವಂತೆ ರೈತಸಂಘಕ್ಕೂ ಒಂದು ವಾಹನ ನೀಡುವುದು ಸೂಕ್ತ. ಪೊಲೀಸ್ ಠಾಣೆಗೆ ವಾಹನ ನೀಡಿರುವುದರ ಔಚಿತ್ಯ ಏನು ಎಂದು ಪ್ರಶ್ನಿಸಿದರು.

ಆಡಳಿತ ಮಂಡಳಿಗೆ ಚುನಾವಣೆ ನಡೆಸುವುದಾಗಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದು, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡಿಲ್ಲ. ಕೂಡಲೇ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡದಿದ್ದರೆ ರೈತಸಂಘ ಮಧ್ಯಪ್ರವೇಶಿಸಬೇಕಾಗುತ್ತದೆ. ಜೂನ್ ತಿಂಗಳಲ್ಲಿ ಕಬ್ಬು ಕಟಾವು ಪ್ರಕ್ರಿಯೆ ಪ್ರಾರಂಭಿಸದಿದ್ದರೆ ಮುಂಬರುವ ದಿನಗಳಲ್ಲಿ ಕಬ್ಬು ಕಟಾವು ಮಾಡುವ ಆಳುಗಳೂ ಸಿಗದೆ ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಮುಖಂಡರಾದ ರಂಗಸ್ವಾಮಿ, ವಿಜಯಕುಮಾರ್, ಮಂಜುನಾಥ, ಶಿವಣ್ಣ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net