

ಬೆಳಗಾವಿ: ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ಪದ್ಧತಿ ಅನುಸರಿಸುವ ನಿಟ್ಟಿನಲ್ಲಿ ಇನ್ನೂ ಗೊಂದಲದಲ್ಲೇ ಇರುವ ರೈತ ಸಮುದಾಯ ಲಾಭದಾಯಕ ಕೃಷಿ ಕೈಗೊಳ್ಳಲು ಹರಸಾಹಸಪಡುತ್ತಿರುವುದೂ ನಿಜ. ಮಾರುಕಟ್ಟೆ ತಂತ್ರ ಹಾಗೂ ಆಧುನಿಕ ಜಗತ್ತಿನ ವ್ಯಾವಹಾರಿಕ ಮುಖವಾಡಗಳನ್ನು ಅರಿಯದ ರೈತರು ಇನ್ನೂ ನಷ್ಟದಲ್ಲೇ ನೇಗಿಲಿಗೆ ಹೆಗಲೊಡ್ಡುತ್ತಿದ್ದಾರೆ. ಆದರೆ, ಸರ್ಕಾರದ ಸಹಾಯಧನ ಹಾಗೂ ಕೃಷಿ ತಜ್ಞರ ಅಭಿಪ್ರಾಯ ಪಡೆದು ಮುನ್ನುಗ್ಗುವ ಕೆಲ ರೈತರು ಒಕ್ಕಲುತನದಲ್ಲೂ ಲಾಭ ಕಾಣುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅಪರೂಪ ಎನಿಸುತ್ತಿದ್ದ ಶ್ರೀಗಂಧ ಕೃಷಿ ಇದೀಗ ಪ್ರಮಾಣ ಹೆಚ್ಚಿಸಿಕೊಂಡಿದ್ದು, ಜಮೀನುಗಳಲ್ಲಿ ಗಂಧದ ಸುಗಂಧ ಘಮಘಮಿಸತೊಡಗಿದೆ.
ಹವಾಮಾನ ವೈಪರೀತ್ಯ, ಮಾರುಕಟ್ಟೆಗಳಲ್ಲಿ ಕೃಷಿ ಬೆಳೆಗಳ ವೌಲ್ಯ ಕುಸಿತ, ಕಾರ್ಮಿಕರ ಕೂಲಿ, ಬೀಜ-ಗೊಬ್ಬರ ಬೆಲೆ ಏರಿಕೆಯಿಂದ ಕಂಗಾಲಾಗಿರುವ ರೈತರು ಇದೀಗ ಸಿರಿಸಂಪತ್ತು ಶ್ರೀಗಂಧ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಜಿಲ್ಲೆಯ ಮಳೆಯಾಶ್ರಿತ, ತೋಟಗಾರಿಕೆ ಬೆಳೆಗಾರರು ಶ್ರೀಗಂಧ ಕೃಷಿಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು, 2020-2023 ಅವಯಲ್ಲಿ 145 ಹೆಕ್ಟೇರ್ ಪ್ರದೇಶದಲ್ಲಿ ರೈತರು ಶ್ರೀಗಂಧ ಸಸಿ ನಾಟಿ ಮಾಡಿದ್ದಾರೆ. ಅದಕ್ಕೂ ಮೊದಲು ಜಿಲ್ಲೆಯಲ್ಲಿ ಕೇವಲ 20 ಹೆಕ್ಟೇರ್ ಪ್ರದೇಶದಲ್ಲಿ ಆಸಕ್ತ ರೈತರು ಶ್ರೀಗಂಧ ಬೆಳೆಯುತ್ತಿದ್ದರು. ಇದೀಗ ಸರ್ಕಾರ ಶ್ರೀಗಂಧ ಬೆಳೆಯಲು ಮತ್ತು ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿದ್ದರಿಂದ ಎರಡು ವರ್ಷಗಳ ಅವಯಲ್ಲಿ ಶ್ರೀಗಂಧ ಬೆಳೆಯುವ ಪ್ರದೇಶ ದುಪ್ಪಟ್ಟಾಗಿದೆ. ಅಲ್ಲದೆ, 2030ರ ವೇಳೆಗೆ ಶ್ರೀಗಂಧ ಬೆಳೆಯುವ ಪ್ರದೇಶ 1 ಸಾವಿರ ಹೆಕ್ಟೇರ್ ವಿಸ್ತರಣೆಯಾಗುವ ಸಾಧ್ಯತೆ ಹೆಚ್ಚಿದೆ.
ಶ್ರೀಗಂಧ ಬೆಳೆಯು ನಾಟಿ ಮಾಡಿದ ನಂತರ 10 ರಿಂದ 12 ವರ್ಷಕ್ಕೆ ಉತ್ತಮ ಫಸಲು ಬರುವುದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗೂ ಸಹಕಾರಿಯಾಗಲಿದೆ. ಶ್ರೀಗಂಧ ಬೆಳೆಗೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲದಿರುವುದರಿಂದ ಮಳೆಯಾಶ್ರಿತ ಪ್ರದೇಶದಲ್ಲೂ ಶ್ರೀಗಂಧ ಕೃಷಿ ವೇಗ ಪಡೆದುಕೊಳ್ಳಲಾರಂಭಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಶ್ರೀಗಂಧಕ್ಕೆ ಕೆಜಿಗೆ 6 ರಿಂದ 8 ಸಾವಿರ ರೂ. ಬೆಲೆ ಇದೆ. 8 ರಿಂದ 10 ವರ್ಷದ ಒಂದು ಮರದಲ್ಲಿ 50 ರಿಂದ 80 ಕೆಜಿಯಷ್ಟು ಪ್ರಮಾಣದ ಶ್ರೀಗಂಧ ದೊರೆಯುತ್ತದೆ. ಒಂದು ಮರ ಲಕ್ಷಾಂತರ ರೂ. ಆದಾಯ ತಂದುಕೊಡುತ್ತದೆ.
ಶ್ರೀಗಂಧದ ಮರಗಳ ಲಾಭ ಸಿಗಬೇಕಾದರೆ ಕನಿಷ್ಠ 10 ವರ್ಷ ಕಾಯಬೇಕು. ಅಲ್ಲದೆ, ಶ್ರೀಗಂಧ ಸಸಿ ನೆಟ್ಟು ಐದು ವರ್ಷದಿಂದಲೇ ಆದಾಯ ಗಳಿಸಬಹುದಾಗಿದೆ. ಐದು ವರ್ಷದ ನಂತರ ಬೀಜ ಬಿಡಲಾರಂಭಿಸುತ್ತದೆ. ಬೀಜ ಮಾರಾಟದಿಂದ ವರ್ಷಕ್ಕೆ ಲಕ್ಷಾಂತರ ರೂ. ಆದಾಯ ಗಳಿಸಬಹುದು. ಒಂದು ಎಕರೆಗೆ 400 ಶ್ರೀಗಂಧ ಮರ ನೆಡಬಹುದಾಗಿದೆ. ಒಂದು ಮರದಿಂದ ಸರಾಸರಿ 15 ರಿಂದ 20 ಕೆಜಿ ಬೀಜ ಸಿಗುತ್ತದೆ. ಒಂದು ಕೆಜಿ ಬೀಜಕ್ಕೆ 1,500 ರಿಂದ 2,500 ರೂ. ಬೆಲೆ ಇದೆ. ಔಷಧ, ಸೌಂದರ್ಯವರ್ಧಕ ಕಂಪನಿಗಳು ಬೀಜ ಖರೀದಿಸುತ್ತಿರುವುದರಿಂದ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಶ್ರೀಗಂಧ ಬೆಳೆಗಾರರು.
ಪ್ರಸ್ತುತ ದಿನಗಳಲ್ಲಿ ಶ್ರೀಗಂಧದ ಮರ, ಕಾಂಡ, ಬೇರುಗಳಿಗೆ ನಿರ್ದಿಷ್ಟ ಬೆಲೆ ಕಟ್ಟಲು ಸಾಧ್ಯವಿಲ್ಲ. 8 ರಿಂದ 10 ವರ್ಷದ ವರೆಗಿನ ಶ್ರೀಗಂಧದ ಮರ ಕನಿಷ್ಠ 4ರಿಂದ 5 ಲಕ್ಷ ದವರೆಗೆ ಬೆಲೆ ಬಾಳುತ್ತದೆ. ಮರದ ಬೇರು ಕೆಜಿಗೆ 16 ಸಾವಿರ ರೂ.ದಿಂದ ಆರಂಭವಾಗುತ್ತದೆ. ಕಳೆದ ಬಾರಿ ಮಲೆನಾಡಿನಲ್ಲಿ ಹಳೆಯ ಶ್ರೀಗಂಧ ಮರವೊಂದು 65 ಲಕ್ಷ ರೂ.ಗೆ ಮಾರಾಟವಾಗಿದೆ. ಶ್ರೀಗಂಧದ ಕೃಷಿ ದೀರ್ಘಕಾಲದ ಬೆಳೆಯಾಗಿದ್ದರೂ ರೈತರಿಗೆ ಆದಾಯ ವೃದ್ಧಿ ಮಾಡುವ ಸಿರಿಸಂಪತ್ತಾಗಿದೆ. ಶ್ರೀಗಂಧ ಬೆಳೆ ಜತೆಗೆ ಕರಿಮೇವು, ಹಣ್ಣು, ತರಕಾರಿ ಬೆಳೆಯಬಹುದು. ನಮ್ಮ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಶ್ರೀಗಂಧ ಬೆಳೆ ಬೆಳೆಯುವ ಸಂಖ್ಯೆ ಹೆಚ್ಚಾಗುತ್ತದೆ. ಆದರೆ, ಕಳ್ಳರ ಕಾಟದಿಂದಾಗಿ ಕೆಲ ರೈತರು ಶ್ರೀಗಂಧ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಗಂಧ ಬೆಳೆಗೆ ಸೂಕ್ತ ಭದ್ರತೆ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ಅಖಿಲ ಕರ್ನಾಟಕ ಶ್ರೀಗಂಧ ಬೆಳೆಗಾರರ ಸಂಘದ ನಿರ್ದೇಶಕ ಹುಲಿರಾಜಗೌಡ ಯಲನಗೌಡ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಶ್ರೀಗಂಧ ಬೆಳೆಯಲು ಹೆಚ್ಚಿನ ರೈತರು ಆಸಕ್ತರಾಗಿದ್ದು, ವರ್ಷದಿಂದ ವರ್ಷಕ್ಕೆ ಬೆಳೆ ಪ್ರದೇಶ ವಿಸ್ತರಣೆಯಾಗುತ್ತಿದೆ. ದೀರ್ಘಕಾಲದ ಬೆಳೆ ಎಂಬ ಕಾರಣಕ್ಕೆ ಹಾಗೂ ಕಳ್ಳರ ಹಾವಳಿಗೆ ಹೆದರಿ ರೈತರು ಶ್ರೀಗಂಧ ಬೆಳೆಯಲು ಹಿಂಜರಿಯುತ್ತಿರುವುದು ಕೂಡ ನಿಜ.| ಮಹಾಂತೇಶ ಮುರಗೋಡ, ಜಿಲ್ಲಾ ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ