

ಹೊಸಪೇಟೆ: ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೊಳ್ಳಬೇಕು ಎಂಬುದು ಶೇ.೯೦ ರಷ್ಟು ಜನರ ಬೇಡಿಕೆಯಾಗಿದ್ದರಿಂದ ಸರ್ಕಾರ ಅದಕ್ಕೆ ಜಾ ಗ ಮಂಜೂರು ಮಾಡಿದೆ. ಆದರೆ, ವಸತಿ ಉದ್ದೇಶದಿಂದ ಕಾರ್ಖಾನೆಗೆ ಬೇರೆ ಸ್ಥಳ ನೋಡುವಂತೆ ಸ್ಥಳೀಯ ಶಾಸಕ ಎಚ್.ಆರ್.ಗವಿಯಪ್ಪ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಗರ್ ಫ್ಯಾಕ್ಟರಿಗೆ ನೀಡಿರುವ ಸರ್ಕಾರಿ ಜಮೀನು ಮಂಜೂರಾತಿಯನ್ನು ರದ್ದು ಪಡಿಸಬೇಕು. ಆ ಜಾಗವನ್ನು ವಸತಿ ಉದ್ದೇಶಕ್ಕಾಗಿ ಬಡವರಿಗೆ ಹಂಚಿಕೆ ಮಾಡಬೇಕು ಎಂದು ಕೋರಿ ಶಾಸಕ ಎಚ್.ಆರ್.ಗವಿಯಪ್ಪ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದು ನನ್ನ ಗಮನಕ್ಕೆ ಬಂದಿದೆ.
ಆದರೆ, ಈ ಭಾಗದ ಕಬ್ಬು ಬೆಳೆಗಾರರ ಒತ್ತಾಯದ ಮೇರೆಗೆ ಹಿಂದಿನ ಸರ್ಕಾರ ಜಂಭೂನಾಥಹಳ್ಳಿಯಲ್ಲಿ ಸುಮಾರು ೮೦ ಎಕರೆ ಪ್ರದೇಶವನ್ನು ಸಕ್ಕರೆ ಕಾರ್ಖಾನೆಗೆ ಮಂಜೂರು ಮಾಡಿದೆ. ಕಾರ್ಖಾನೆ ಮಾಲೀಕರು ಈಗಾಗಲೇ ಜಮೀನು ಶುಲ್ಕವನ್ನೂ ಪಾವತಿಸಿದ್ದಾರೆ. ಕಾರ್ಖಾನೆ ಸ್ಥಾಪನೆಗೆ ಕ್ಯಾಬಿನೆಟ್ ಅನು ಮೋದನೆ ನೀಡಿದ್ದರಿಂದ ಅಲ್ಲೇ ತೀರ್ಮಾನವಾಗಬೇಕು. ಆದರೂ, ಅಧಿಕಾರಿಗಳೊಂದಿಗೆ ಇಂದು ಸ್ಥಳ ಪರಿಶೀಲಿಸುತ್ತೇನೆ. ಆನಂತರ ಮುಂದಿನ ನಿರ್ಧಾರ ಎಂದಷ್ಟೇ ಹೇಳಿದರು.
ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಕ್ಷೇತ್ರ ಮತ್ತು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಮ್ಮದೇ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರು ಅಧಿಕಾರಿಗಳನ್ನು ಶಿಫಾರಸು ಮಾಡುತ್ತಿದ್ದಾರೆ. ಎಲ್ಲ ಸರ್ಕಾರಗಳಲ್ಲಿ ಅಧಿಕಾರಿಗಳ ವರ್ಗಾವಣೆ ಎಂಬುದು ಸಾಮಾನ್ಯ ಪ್ರಕ್ರಿತೆ ಅಷ್ಟೇ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ರಾಜ್ಯಸಭೆ ಮಾಜಿ ಸದಸ್ಯ ಕೆ.ಸಿ.ಕೊಂಡಯ್ಯ ಹಾಗೂ ಮಾಜಿ ಶಾಸಕ ಸಿರಾಜ್ ಶೇಖ್ ಕಾರಣವೆಂದು ಎಚ್.ಬಿ.ಹಳ್ಳಿಯ ಮಾಜಿ ಶಾಸಕ ಭೀಮಾನಾಯ್ಕ ಬರೆದಿರುವ ಪತ್ರದ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ. ಆದರೆ, ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಜತೆಗೆ ಸುಸೂತ್ರ ಆಡಳಿತ ಜಾರಿಗೆ ಶ್ರಮಿಸುತ್ತೇನೆ. ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ತಿಳಿಯುವ ಉದ್ದೇಶದಿಂದ ತಾಲೂಕವಾರು ಕೆಡಿಪಿ ಸಭೆಗಳನ್ನು ಹಮ್ಮಿಕೊಂಡಿದ್ದೇನೆ. ಆದಷ್ಟು ಬೇಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್., ಜಿ.ಪಂ.ಸಿಇಒ ಸದಾಶಿವ ಪ್ರಭು, ಎಸ್ಪಿ ಶ್ರೀಹರಿ ಬಾಬು, ಎಡಿಸಿ ಅನುರಾಧ ಜಿ., ಸಹಾಯಕ ಆಯುಕ್ತ ನೋಂಗ್ಜಾಯ್ ಅಕ್ರಮ ಅಲಿ ಷ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿರಾಜ್ ಶೇಖ್, ಎಚ್.ಎನ್.ಎಫ್.ಇಮಾಮ್ ನಿಯಾಜಿ ಉಪಸ್ಥಿತರಿದ್ದರು.