

ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಹೊರ ಗುತ್ತಿಗೆ ಮತ್ತು ಹಂಗಾಮಿ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಿರುವುದನ್ನು ಖಂಡಿಸಿ ನೌಕರರು ಎಂಆರ್‌ಎನ್ ಸಂಸ್ಥೆಯ ಆಡಳಿತ ಮಂಡಳಿ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ರೈಲ್ವೆ ನಿಲ್ದಾಣದ ಸಮೀಪವಿರುವ ಕಾರ್ಖಾನೆಯ ಜನರಲ್ ಮ್ಯಾನೇಜರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು 40 ವರ್ಷಗಳ ಅವಗೆ ಗುತ್ತಿಗೆ ಪಡೆದಿರುವ ಎಂಆರ್‌ಎನ್ ಸಂಸ್ಥೆ ಗುತ್ತಿಗೆ ಕರಾರನ್ನು ಉಲ್ಲಂಸಿ ಪಿಎಸ್‌ಎಸ್‌ಕೆ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಿದೆ. ಕಾರ್ಖಾನೆ ಆಡಳಿತ ಮಂಡಳಿ ನಡೆಯ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯ ಕೂಡ ಆದೇಶ ನೀಡಿ ಕಾರ್ಮಿಕರನ್ನು ಗುತ್ತಿಗೆ ಕರಾರಿನಂತೆ ನಡೆಸಿಕೊಳ್ಳುವಂತೆ ಸೂಚಿಸಿದ್ದರೂ, ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡುತ್ತಿಲ್ಲ. ಹೊರ ಗುತ್ತಿಗೆ ಆಧಾರದ ಮೇಲೆ ಕಳೆದ ಎರಡು ದಶಕಗಳಿಂದ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಎಂಆರ್‌ಎನ್ ಸಂಸ್ಥೆಗೆ ಗುತ್ತಿಗೆ ನೀಡುವ ಸಂದರ್ಭದಲ್ಲಿ ಸರ್ಕಾರ ಪಿಎಸ್‌ಎಸ್‌ಕೆ ಕಾರ್ಖಾನೆ ನೌಕರರನ್ನು ಮುಂದುವರಿಸಿಕೊಂಡು ಹೋಗುವಂತೆ ಕರಾರಿನಲ್ಲಿ ನಮೂದಿಸಿದೆ. ಈ ಒಡಂಬಡಿಕೆಯಂತೆ ಎಂಆರ್‌ಎನ್ ಸಂಸ್ಥೆ ಕಾರ್ಮಿಕರನ್ನು ನಡೆಸಿಕೊಳ್ಳಬೇಕು. ಆದರೆ ಉದ್ದೇಶಪೂರ್ವಕವಾಗಿ ಪಿಎಸ್‌ಎಸ್‌ಕೆ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಕಾರ್ಖಾನೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಉತ್ತರ ಭಾರತದ ನೌಕರರಿಗೆ ಮಣೆ ಹಾಕಲಾಗಿದೆ. ಇದರಿಂದ ಕನ್ನಡಿಗ ನೌಕರರಿಗೆ ಅನ್ಯಾಯವಾಗಿತ್ತಿದೆ. ಸಂಸ್ಥೆಯ ಆಡಳಿತ ಮಂಡಳಿ ಧೋರಣೆ ವಿರುದ್ಧ ರಾಜ್ಯ ಉಚ್ಚನ್ಯಾಯಾಲಯ ಕೂಡ ಆದೇಶ ನೀಡಿದ್ದು, ಅದರಲ್ಲಿ ಗುತ್ತಿಗೆ ಕರಾರಿಗೆ ಲೋಪವಾಗದಂತೆ ಆಡಳಿತ ಮಂಡಳಿ ನಡೆದುಕೊಳ್ಳಬೇಕು ಎಂದು ಆದೇಶ ನೀಡಲಾಗಿದೆ. ಆದರೆ ಎಂಆರ್‌ಎನ್ ಸಂಸ್ಥೆ ಪಿಎಸ್‌ಎಸ್‌ಕೆ ಕಾರ್ಮಿಕರ ಯಾವುದೇ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಜತೆಗೆ ಪ್ರತಿ ಹಂಗಾಮಿನಲ್ಲೂ ನೌಕರರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ದೂರಿದರು.
ಕಾರ್ಖಾನೆಯನ್ನು ಗುತ್ತಿಗೆ ಪಡೆಯುವಾಗ ಕಾರ್ಖಾನೆಯ 109 ನೌಕರನ್ನು ಯಥಾವತ್ತಾಗಿ ಮುಂದುವರಿಸಬೇಕು ಎಂಬ ಅಂಶದೊಂದಿಗೆ ಗುತ್ತಿಗೆ ಪಡೆಯಲಾಗಿದೆ. ಕರಾರಿನಲ್ಲಿ ನೌಕರರನ್ನು ಮುಂದುವರೆಸಬೇಕು, ಇಲ್ಲವೇ ಸ್ವಯಂ ನಿವೃತ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಲಾಗಿದೆ. ಆದರೆ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಉದ್ದೇಶಪೂರ್ವಕವಾಗಿ ಪಿಎಸ್‌ಎಸ್‌ಕೆ ನೌಕರರಿಗೆ ತೊಂದರೆ ಕೊಡಲಾಗುತ್ತಿದೆ. ಎಂಆರ್‌ಎನ್ ಸಂಸ್ಥೆ ಮೂಲಕ ಕೆಲಸ ಪಡೆದಿರುವ ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದ ನೌಕರರನ್ನು ಕೆಲಸದಿಂದ ತೆಗೆಯುವ ಗೋಜಿಗೆ ಸಂಸ್ಥೆ ಹೋಗುತ್ತಿಲ್ಲ. ಆದರೆ ಪಿಎಸ್‌ಎಸ್‌ಕೆ ನೌಕರರನ್ನು ಟಾರ್ಗೇಟ್ ಮಾಡಿ ವಿನಾ ಕಾರಣ ತೊಂದರೆ ಕೊಡಲಾಗುತ್ತಿದೆ. ಎಂಆರ್‌ಎಸ್ ಸಂಸ್ಥೆಯ ಜನರಲ್ ಮ್ಯಾನೇಜರ್ ಅವರಿಗೆ ಕನ್ನಡ ಮಾತನಾಡುವುದಕ್ಕೆ ಬರುವುದಿಲ್ಲ. ಇವರು ಉತ್ತರ ಭಾರತದ ಕಡೆಯವರಾಗಿದ್ದು ಹಿಂದಿ ಭಾಷಿಕರಿಗೆ ಹೆಚ್ಚಿನ ಮಣೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಆತ್ಮಹತ್ಯೆ ಯತ್ನಿಸಿದ ಕಾರ್ಮಿಕರು: 2023ರಲ್ಲಿ ಇದೇ ರೀತಿಯಲ್ಲಿ ಹೊರಗುತ್ತಿಗೆ ಕಾರ್ಮಿಕರನ್ನು ಬಿಡುಗಡೆಗೊಳಿಸಿರುವ ಎಂಆರ್‌ಎನ್ ಸಂಸ್ಥೆಯ ಆಡಳಿತ ಮಂಡಳಿ ನಡೆಯ ವಿರುದ್ಧ ಆಕ್ರೋಶಗೊಂಡ ಕಾರ್ಮಿಕರು, ಕಾರ್ಖಾನೆ ಚಿಮಣೆ ಏರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಸಂಸ್ಥೆಯ ಆಡಳಿತ ಮಂಡಳಿ ವರ್ತನೆ ಬದಲಾಗದಿದ್ದರೆ ಈಗಲೂ ಅದೇ ಪರಿಸ್ಥಿತಿ ಬರಬಹುದು ಎಂದು ಪ್ರತಿಭಟನಾ ನೌಕರರು ಎಚ್ಚರಿಕೆ ನೀಡಿದರು.
ಪಿಎಸ್‌ಎಸ್‌ಕೆ ನೌಕರರ ಮುಖಂಡರಾದ ಆನಂದ್, ಯೋಗೇಶ್, ಕೆ.ಜಿ.ಮಧು, ಅಶ್ವಥ್, ಎಂ್ಲಾಯಿಸ್ ಯೂನಿಯನ್ ಅಧ್ಯಕ್ಷ ಪುಟ್ಟಮಾದೇಗೌಡ, ನಿರಂಜನ್, ಪ್ರಮೀಳಾ, ಅಂಜನ್, ಲೋಕೇಶ್ ಇತರರು ಇದ್ದರು.