

ಖಂಡೇನಹಳ್ಳಿ ಬಸವರಾಜ್ ಹಿರಿಯೂರು
ಹಣ್ಣುಗಳ ರಾಜ ಮಾವು ಜತೆ ನೇರಳೆ ಹಣ್ಣು ಮಾರುಕಟ್ಟೆ ಪ್ರವೇಶಿಸಿದ್ದು, 1 ಕೆಜಿ ಹಣ್ಣು 150 ರಿಂದ 200ಕ್ಕೆ ಮಾರಾಟವಾಗುತ್ತಿದೆ. ಇದು ಸೀಸನಲ್ ಹಣ್ಣು ಆಗಿರುವುದರಿಂದ ಬೇಡಿಕೆ ಹೆಚ್ಚು ಇದೆ.
ಬಯಲುಸೀಮೆ ರೈತರು ದಾಳಿಂಬೆ, ಪಪ್ಪಾಯ, ಶ್ರೀಗಂಧ ಇತರ ಬೆಳೆಗಳ ಜತೆ ಮಿಶ್ರ ಬೇಸಾಯವಾಗಿ ನೇರಳೆ ಹಣ್ಣನ್ನು ಬೆಳೆಯುತ್ತಿದ್ದು, ಔಷಧೀಯ ಗುಣ ಹೊಂದಿರುವ ನೇರಳೆ ಹಣ್ಣು ಖರೀದಿಗೆ ಗ್ರಾಹಕರು ಮುಗಿಬೀಳುತ್ತಿದ್ದಾರೆ.
ಅರಣ್ಯ ಇಲಾಖೆ ರಸ್ತೆ ಬದಿಯಲ್ಲಿ ಗಿಡ ನೆಟ್ಟು ಪೋಷಿಸುವುದರಿಂದ ಹಕ್ಕಿ-ಪಕ್ಷಿಗಳಿಗೆ ಆಹಾರವಾಗುತ್ತದೆ. ರೈತರು ಜಮೀನಿನ ಬದುಗಳಲ್ಲಿ ದೇಸಿ ತಳಿ ಸಸಿ ನಾಟಿ ಮಾಡುತ್ತಾರೆ. ಇಳುವರಿ ಪಡೆಯಲು 8 ರಿಂದ 10 ವರ್ಷ ಬೇಕು.
ಆದರೆ, ಜಂಬು ತಳಿ 3 ರಿಂದ 4 ವರ್ಷಕ್ಕೆ ಫಲ ನೀಡುತ್ತವೆ. ತೋಟಗಾರಿಕೆ ಬೆಳೆ ಜತೆ ಮಿಶ್ರ ಬೇಸಾಯವಾಗಿ ಅಳವಡಿಸಿಕೊಂಡರೆ ಹೆಚ್ಚು ಲಾಭ ಗಳಿಸಬಹುದು. ಮಾರ್ಚ್-ಏಪ್ರಿಲ್‌ನಲ್ಲಿ ಹೂ ಬಿಡಲಾರಂಭಿಸಿ, ಜೂನ್ ತಿಂಗಳಲ್ಲಿ ಹಣ್ಣಾಗುತ್ತದೆ. ಒಂದು ಮರ 2-3 ಕ್ವಿಂಟಾಲ್ ಫಸಲು ಕೊಡುತ್ತದೆ. ತಾಲೂಕಿನಲ್ಲಿ ಅಂದಾಜು 50 ಹೆಕ್ಟೇರ್ ಪ್ರದೇಶದಲ್ಲಿ ನೇರಳೆ ಕೃಷಿ ಮಾಡಲಾಗಿದೆ.
ಔಷಧೀಯ ಗುಣ: ಸಕ್ಕರೆ ಕಾಯಿಲೆಗೆ ನೇರಳೆ ಹಣ್ಣು ಸಂಜೀವಿನಿ ಎಂಬ ನಂಬಿಕೆ ಇದೆ. ಹಣ್ಣಿನ ತಿರಳನ್ನು ವೈನ್, ವಿನೆಗರ್, ಜೆಲ್ಲಿ, ಜಾಮ್ ತಯಾರಿಕೆಗೂ ಬಳಸಲಾಗುತ್ತದೆ. ಇದರ ಬೀಜದಲ್ಲಿ ಪ್ರೊಟೀನ್, ಕಾರ್ಬೊಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುವುದರಿಂದ ಆಯುರ್ವೇದ, ಯುನಾನಿ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪೊಟ್ಯಾಸಿಯಂ ತುಂಬಿದ್ದು, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಪಾರ್ಶ್ವವಾಯು ಇತರ ಕಾಯಿಲೆ ಗುಣಪಡಿಸಲು ಉಪಯುಕ್ತ ಎನ್ನಲಾಗುತ್ತದೆ.
ದೇಸಿ ತಳಿ ಗಿಡದಿಂದ ಕಸಿ ಮಾಡಿದ ಜಂಬು ನೇರಳೆ ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ಪ್ರಯೋಜನಗಳಿವೆ. ಚಿಕ್ಕದಾದ ನೇರಳೆ ಹಣ್ಣಿನಲ್ಲಿ ರೋಗ ನಿರೋಧಕಗಳು, ಜೀ ಸತ್ವಗಳು-ಖನಿಜಗಳು ಸಮೃದ್ಧವಾಗಿವೆ.
ನೇರಳೆ ಕೃಷಿಗೆ ಕೆಂಪು ಭೂಮಿ ಸೂಕ್ತವಾಗಿದ್ದು, ಮಿಶ್ರ ಬೆಳೆಯಾಗಿ ಬೆಳೆದರೆ ಹೆಚ್ಚು ಲಾಭ ಗಳಿಸಬಹುದು. ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿ ಸೌಲಭ್ಯಕ್ಕೆ ಸಹಾಯಧನ ಸಿಗಲಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಸಸಿ ನೆಡಲು ಅವಕಾಶ ಇದೆ.ಲೋಕೇಶ್, ನಿರ್ದೇಶಕ, ಹಿ.ಸ.ತೋಟಗಾರಿಕೆ, ಹಿರಿಯೂರು ನೇರಳೆ ಕೃಷಿಯಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿ ಜಂಬು ನೇರಳೆ ಹಣ್ಣಿಗೆ ಬೇಡಿಕೆ-ಬೆಲೆ ಇದೆ. ಹಣ್ಣಿನಲ್ಲಿ ರೋಗ ನಿರೋಧಕ ಔಷಧ ಗುಣ ಇರುವುದರಿಂದ ಸರ್ವ ರೋಗಕ್ಕೂ ಸಂಜೀವಿನಿಯಾಗಿದೆ.ಡಾ.ಒ.ಕುಮಾರ್, ಮುಖ್ಯಸ್ಥ, ಕೃಷಿ ವಿಜ್ಞಾನ ಕೇಂದ್ರ, ಬಬ್ಬೂರು ಮಿಶ್ರ ಬೇಳೆಯಾಗಿ ನೇರಳೆ ಕೃಷಿ ಮಾಡುವುದರಿಂದ ಬೇಸಾಯದ ಖರ್ಚು-ವೆಚ್ಚಗಳಿಗೆ ಅನುಕೂಲವಾಗಲಿದೆ. ಭೂಮಿ ಫಲವತ್ತತೆ ಕಾಪಾಡುವುದರ ಜತೆಗೆ, ಪಕ್ಷಿಗಳ ಆಹಾರಕ್ಕೆ ಸಹಕಾರ ಆಗಲಿದೆ.ಜಿ.ಕಲ್ಪನಾ, ಪ್ರಗತಿಪರ ರೈತ ಮಹಿಳೆ