

ಬೆಂಗಳೂರು: ಕರ್ನಾಟಕ ಸುಗಮ ಸಂಗೀತ ಪರಿಷತ್ತು ವತಿಯಿಂದ ಆಗಸ್ಟ್ 2 ಮತ್ತು 3ರಂದು ಮೈಸೂರಿನ ಕಲಾಮಂದಿರ ಆವರಣದಲ್ಲಿ ‘19ನೇ ಸುಗಮ ಸಂಗೀತ ಸಮ್ಮೇಳನ’ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಸುಗಮ ಸಂಗೀತ ಗಾಯಕ ನಗರ ಶ್ರೀನಿವಾಸ ಉಡುಪ ಅವರನ್ನು ಆಯ್ಕೆ ಮಾಡಲಾಗಿದೆ.
ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ನಾಡಿನ ನಾನಾ ಭಾಗಗಳಿಂದ 300ಕ್ಕೂ ಅಧಿಕ ಸುಗಮ ಸಂಗೀತ ಕಲಾವಿದರು, ಕವಿಗಳು ಭಾಗವಹಿಸಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸುಗಮಸಂಗೀತ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.
ಇನ್ನು ಸಮ್ಮೇಳನದಲ್ಲಿ 2023 ಮತ್ತು 2024ನೇ ಸಾಲಿನ ‘ಕಾವ್ಯಶ್ರೀ’ ಮತ್ತು ‘ಭಾವಶ್ರೀ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದ್ದು, ‘ಕಾವ್ಯಶ್ರೀ’ ಪ್ರಶಸ್ತಿಗೆ ಕ್ರಮವಾಗಿ ಕವಿ ಬಿ.ಆರ್. ಲಕ್ಷ್ಮಣ ರಾವ್ ಮತ್ತು ಕವಿ ಡಾ. ನಾ. ದಾಮೋದರ ಶೆಟ್ಟಿ ಹಾಗೂ ‘ಭಾವಶ್ರೀ’ ಪ್ರಶಸ್ತಿಗೆ ಕ್ರಮವಾಗಿ ಗಾಯಕಿ ರತ್ನಮಾಲ ಪ್ರಕಾಶ್ ಮತ್ತು ಗಾಯಕಿ ಕೆ.ಎಸ್. ಸುರೇಖ ಅವರನ್ನು ಆಯ್ಕೆ ಮಾಡಲಾಗಿದೆ.
ಸಮ್ಮೇಳನವನ್ನು ಆ. 2ರಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಉಸ್ತುವಾಗಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಪರಿಷತ್ತು ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಆ. 3ರಂದು ಸಮಾರೋಪ ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಡಾ. ಹಂಪನಾಗರಾಜಯ್ಯ, ಲೇಖಕ ಸಿ.ಪಿ. ಕೃಷ್ಣಕುಮಾರ್ ಮೊದಲಾದವರು ಭಾಗವಹಿಸಲಿದ್ದಾರೆ.