ಟನ್ ಕಬ್ಬಿಗೆ 4,500 ರೂ.‌ನೀಡಲು ಬೆಳೆಗಾರರು ಆಗ್ರಹ

IMG-20241029-WA0005.jpg
Published on
ಬೆಳಗಾವಿ: ಪ್ರಸಕ್ತ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ 4,500 ರೂ. ದರ ಘೋಷಿಸಬೇಕು. ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶ ಬೆಳೆಗಾರರಿಗೆ ನೀಡುವ ಕುರಿತು ಕಾರ್ಖಾನೆಗಳು ಸ್ಪಷ್ಟಪಡಿಸಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು, ಕಬ್ಬು ಬೆಳೆಗಾರರು ಆಗ್ರಹಿಸಿದರು. ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆಗಳ ಅಧಿಕಾರಿಗಳೊಂದಿಗೆ ಜರುಗಿ ಸಭೆಯಲ್ಲಿ ಅತಿವೃಷ್ಟಿ,ಅನಾವೃಷ್ಟಿಯಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ದರ ನೀಡಬೇಕು. ಅಲ್ಲದೆ, ಕಳೆದ ಸಾಲಿನ ಬಾಕಿ ಕಬ್ಬಿನ ಬಿಲ್ ನೀಡಿದ ಬಳಿಕ ಕಾರ್ಖಾನೆಗಳು ಆರಂಭಿಸಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಹಂಗಾಮಿಗೆ ನ್ಯಾಯ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ದರ ಅವೈಜ್ಞಾನಿಕ ಕತೆಯಿಂದ ಕೂಡಿದೆ. ಹಾಗಾಗಿ ಸಕ್ಕರೆ ಕಾರ್ಖಾನೆಗಳು ಕಟಾವು ಮತ್ತು ಸಾರಿಗೆ ವೆಚ್ಚ ಹೊರತು ಪಡಿಸಿ ರೈತರಿಗೆ ಟನ್‌ಗೆ ಕಬ್ಬಿಗೆ 3,500 ರೂ. ಮುಂಗಡವಾಗಿ ನೀಡಬೇಕು. ಬಳಿಕ ಎರಡನೇ ಕಂತಿನಲ್ಲಿ 1000 ರೂ. ನೀಡಬೇಕು. ಮಹಾರಾಷ್ಟ್ರ ಮಾದರಿಯಲ್ಲಿಯೇ ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ದರ ಘೋಷಣೆ ಮಾಡಿ ಕಬ್ಬು ನುರಿಸುವ ಹಂಗಾಮು ಆರಂಭಿಸಬೇಕು ಎಂದು ಬೆಳೆಗಾರರು ಆಗ್ರಹಿಸಿದರು. ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿಯಲ್ಲಿ ವಂಚನೆ ಮಾಡುತ್ತಿದ್ದು, ಪ್ರತಿಶತ ಒಂದರಷ್ಟು ಇಳುವರಿ ಕಡಿಮೆ ತೋರಿಸಿ ಹಣ ಲೂಟಿ ಮಾಡುತ್ತಿವೆ. ಹಾಗಾಗಿ ಸರ್ಕಾರದಿಂದಲೇ ಸಕ್ಕರೆ ಇಳುವರಿ ಪರಿಶೀಲಿಸುವ ಕೆಲಸ ಆಗಬೇಕು. ಜಿಲ್ಲೆಯಲ್ಲಿನ ಪ್ರತಿಷ್ಠಿತ ವ್ಯಕ್ತಿಗಳ ಕಾರ್ಖಾನೆಗಳು ಇಳುವರಿಯಲ್ಲ ಮೋಸ ಮಾಡಿ ಟನ್ ಕಬ್ಬಿನ 2,500 ರಿಂದ 2,800 ರೂ. ವರೆಗೆ ದರ ನೀಡುತ್ತಿವೆ. ಎರಡನೇ ಕಂತಿನಲ್ಲಿ ಹಣ ನೀಡುತ್ತೇವೆ ಎನ್ನುತ್ತಾರೆ.ಆದರೆ, 4 ವರ್ಷಗಳಿಂದ ಯಾವುದೇ ಕಾರ್ಖಾನೆಯವರು ಎರಡನೇ ಬಿಲ್ ನೀಡಿಲ್ಲ ಎಂದು ರೈತರು ದೂರಿದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 28 ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿವೆ. 18 ರಿಂದ 20 ಟನ್ ತೂಕದ ಪ್ರತಿ ಲೋಡ್‌ಗೆ 2 ರಿಂದ 3 ಟನ್ ತೂಕದಲ್ಲಿ ಮೋಸ ಮಾಡುತ್ತಿವೆ. ಕೆಲ ಕಾರ್ಖಾನೆಗಳು 5 ಟನ್‌ವರೆಗೆ ತೂಕದಲ್ಲಿ ಏರುಪೇರು ಉಂಟಾಗುತ್ತಿದೆ. ಎಪಿಎಂಸಿ ವತಿಯಿಂದಲೇ ತೂಕದ ಯಂತ್ರಗಳನ್ನು ಅಳವಡಿಸುವಂತೆ ಪದೇ ಪದೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು ಪ್ರಯೋಜನವಾಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಆಹಾರ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ನಾಯಕ, ಸಕ್ಕರೆ ಆಯುಕ್ತಾಲಯದ ಜಂಟಿ ನಿರ್ದೇಶಕ ಚೇತನಾ ಪಾಟೀಲ, ಎಸ್.ನಿಜಲಿಂಗಪ್ಪ ಸಂಸ್ಥೆ ನಿರ್ದೇಶಕ ಸಿ.ವಿ. ಪಾಟೀಲ , ರೈತ ಮುಖಂಡರಾದ ಪ್ರಕಾಶ ನಾಯಕ, ರಾಜು ಪವಾರ, ರಾಘವೇಂದ್ರ ನಾಯಕ, ರವಿ ಸಿದ್ದಣ್ಣವರ ಇತರರಿದ್ದರು. ............... ಕೋಟ್ಸ್ ಕಬ್ಬು ಬೆಳೆಗಾರರ ಬೇಡಿಕೆ ಅನುಗುಣವಾಗಿ ಕಬ್ಬಿನ ದರ ನಿಗದು ಪಡಿಸಿ ಘೋಷಿಸಿಬೇಕು. ಬಾಕಿ ಕಬ್ಬಿನ ಬಿಲ್‌ಗಳನ್ನು ನಿಗದಿಸಮಯದಲ್ಲಿ ನೀಡಬೇಕು. ಕಬ್ಬಿನ ತೂಕದಲ್ಲಿ ಏರುಪೇರು ಕಂಡು ಬಂದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಕಬ್ಬು ಬೆಳೆಗಾರರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಜಿಲ್ಲಾಡಳಿತ ಕ್ರಮ ವಹಿಸಲಿದೆ. -ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net