26ರಂದು ಸೂಫಿ ಸಂತರ ಸಮಾವೇಶ,  ಹುಬ್ಬಳ್ಳಿಯಲ್ಲಿ ಧಾರ್ಮಿಕ ಗುರುಗಳ ಸಮಾಗಮ

IMG_20250724_170106_147-1.jpg
Published on

ಹುಬ್ಬಳ್ಳಿ: ಕರ್ನಾಟಕ ಸೂಫಿ ಸಂತರ ಸೌಹಾರ್ದ ವೇದಿಕೆ ಆಶ್ರಯದಲ್ಲಿ ಸೂಫಿ ಸಂತರ ಸಮಾವೇಶವನ್ನು ಹಳೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಜು. 26ರಂದು ಸಂಜೆ 6ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರ್ಗಿಯ ಸಜ್ಜಾದೆ ನಶೀನ್ ದರ್ಗಾ ಹಜರತ್ ಕ್ವಾಜಾ ಬಂದೇನವಾಜ್ ಗೇಸುರಾಜ್, ರಾಜ್ಯ ವಕ್ಫ ಬೋರ್ಡ್ ಅಧ್ಯಕ್ಷ ಶರೀಫ್ ಪೀರ್ ಏ ತರೀಕತ್ವ ಹಾಪೀಜ್ ಸೈಯದ್ ಮಹ್ಮದ್ ಅಲಿ ಹುಸೇನ್ ಸಹಾಬ್, ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಶಿರಹಟ್ಟಿ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸಮಾವೇಶ ಉದ್ಘಾಟಿಸುವರು ಎಂದರು.

ಕೋಮು ಸೌಹಾರ್ದತೆ ಬೆಳೆಸುವುದು, ಸಾಮರಸ್ಯ ಕಾಪಾಡುವ ಸಲುವಾಗಿ ಎಲ್ಲ ಸಮಾಜದ ಸೂಫಿ ಸಂತರ ಸಮಾವೇಶ ಮಾಡಲಾಗುತ್ತಿದೆ. ಸುಮಾರು 20 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಕಾನೂನು ಸಚಿವ ಎಚ್.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ರಾಜ್ಯಸಭೆ ಸದಸ್ಯ ನಾಸೀರ ಹುಸೇನ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಶಾಸಕ ಪ್ರಸಾದ ಅಬ್ಬಯ್ಯ, ಜಿ.ಎಸ್. ಪಾಟೀಲ, ಅಂಜುಮನ್ ಸಂಸ್ಥೆಯ ಇಸ್ಮಾಯಿಲ್ ತಮಟಗಾರ ಸೇರಿ ಅನೇಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದರು.

ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಅನೇಕ ವಿಚಾರಗಳು ಇಲ್ಲಿ ಚರ್ಚೆ ಆಗಲಿವೆ. ಇದಕ್ಕಾಗಿ ಸಮಿತಿಯವರು ಅನೇಕ ಮಹನೀಯರನ್ನು ಕರೆದಿದ್ದಾರೆ. ವಿಶೇಷವಾಗಿ ಇಲ್ಲಿ ಕೋಮು ಸಾಮರಸ್ಯದ ಬಗ್ಗೆ ಮಾತನಾಡಲಿದ್ದಾರೆ. ಈ ಸಂದೇಶ ಎಲ್ಲ ಕಡೆ ಪಸರಿಸಲಿ ಎಂಬ ಉದ್ದೇಶ ಹೊಂದಲಾಗಿದೆ. ನಿರೀಕ್ಷೆಗಿಂತ ಹೆಚ್ಚು ಜನ ಸೇರಲಿದ್ದಾರೆ ಎಂದರು.

ಮಹಾನ್ ಯೋಗಿಗಳು, ಸೂಫಿ ಸಂತರು ನಡೆದಾಡಿದ ಪುಣ್ಯ ನೆಲ ಇದಾಗಿದೆ, ಹಿಂದು ಮುಸ್ಲಿಂ, ಕೆಸ್ತ್, ಪಾರ್ಸಿ ಸೇರಿ ಎಲ್ಲ ಧರ್ಮಗಳ ಸಂಗಮ ನಾಡು ಇದು. ಸಂತರು ಹಾಕಿ ಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂಬುದು ಇದರ ಪ್ರಮುಖ ಉದ್ದೇಶ ಎಂದರು.

ಸೈಯದ್ ತಾಜುದ್ದೀನ್ ಪೀರಾ ಮಾತನಾಡಿ, ಈ ಹಿಂದೆ ಹಲವು ಸಂದರ್ಭಗಳಲ್ಲಿ ಹಿಂದು, ಮುಸ್ಲಿಂ ಏನೇ ಸಮಸ್ಯೆ ಇದ್ದರೂ ಮೂರುಸಾವಿರ ಮಠ ಸೇರಿ ಈ ಭಾಗದ ಸ್ವಾಮೀಜಿಗಳು ಮುಂದೆ ನಿಂತು ಪರಿಹಾರ ಮಾಡುತ್ತ ಬಂದಿದ್ದಾರೆ. ಅಂತಹ ಪರಂಪರೆ ಮುಂದುವರಿಯಬೇಕು. ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕೆಂದು ಸಮಾವೇಶ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಅನೇಕ ಸ್ವಾಮೀಜಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದರು.

ಮುಖಂಡರಾದ ಅನಿಲ ಪಾಟೀಲ, ಷಹಜಹಾನ್ ಮುಜಾಹಿದ್, ಅರ್ಜುನ ಪಾಟೀಲ, ಚಂದ್ರಕಾಂತ ಜುಟ್ಟಲ್, ಯುಸೂಫ ಸವಣೂರ, ಅಲ್ತಾಫ್ ಕಿತ್ತೂರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net