ಸಾಮರಸ್ಯದಿಂದ ಶಾಂತಿ, ಅಭಿವೃದ್ಧಿ,  ಸೂಫಿ ಸಂತ ಸಮ್ಮೇಳನದ ಸಂದೇಶ,  ಎಲ್ಲ ಕಡೆ ಸಮಾವೇಶ ನಡೆಸಲು ಮನವಿ

IMG-20250727-WA0000-1.jpg
Published on

ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಶನಿವಾರ ಕರ್ನಾಟಕ ಸೂಫಿ ಸಂತರ ಸೌಹಾರ್ದ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ್ದ ಸೂಫಿ ಸಂತ ಸಮ್ಮೇಳನವು ಶಾಂತಿ, ಸಹಬಾಳ್ವೆ, ಸಾಮರಸ್ಯ, ಭಾವೈಕ್ಯತೆಯನ್ನು ಸಾರುವಲ್ಲಿ ಯಶಸ್ವಿಯಾಯಿತು.

ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಧರ್ಮ ಗುರುಗಳು, ಮಠಾಧೀಶರು, ಸಂತರು, ರಾಜಕೀಯ ಮುಖಂಡರು ಸಾಮರಸ್ಯಕ್ಕೆ ಹೆಸರಾದ ಭಾರತದಲ್ಲಿ ಸೂಫಿ ಸಂತರು ಹಾಕಿಕೊಟ್ಟ ದಾರಿಯಲ್ಲಿ ಸಾಗುವ ಅಗತ್ಯವನ್ನು ಒತ್ತಿ ಹೇಳಿದರು.

ಶಿರಹಟ್ಟಿ ಭಾವೈಕ್ಯ ಮಠದ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ದ್ವೇಷ ಬಿಡು ಪ್ರೀತಿ ಮಾಡು ಇದು ಜಗದ್ಗುರು ಫಕಿರೇಶ್ವರರ ಸಂದೇಶ. ಇದನ್ನೇ ಸೂಫಿ ಸಂತರು ಸಾರಿದ್ದಾರೆ. ಸಂತ ಸಮಾವೇಶ ಹೇಗೆ ಮಾಡಬೇಕು ಎಂಬುದನ್ನು ಹುಬ್ಬಳ್ಳಿಯಲ್ಲಿ ಮಾಡಿ ತೋರಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ದೇಶದಲ್ಲಿ ಒಂದು ವೇಳೆ ಸೂಫಿ ಸಂತರು, ಶರಣರು ಹುಟ್ಟದಿದ್ದರೆ ನದಿಗಳು ರಕ್ತದಿಂದ ಹರಿಯುತ್ತಿತ್ತು. 12ನೇ ಶತಮಾನದಲ್ಲಿ ದೇಶಕ್ಕೆ ಬಂದ ಸೂಫಿಗಳು ಎಲ್ಲ ಧರ್ಮಗಳನ್ನು ಒಗ್ಗೂಡಿಸಿ ಸಮನ್ವಯತೆ ಮೂಡಿಸಲು ಪ್ರಯತ್ನ ಮಾಡಿದರು. ಎಲ್ಲ ಧರ್ಮಗಳ ಕೊಂಡಿಯಾಗಿ ಕೆಲಸ ಮಾಡಿದರು. ವಿವಿಧತೆಯಲ್ಲಿ ಏಕತೆ ಸಾರಿದರು ಎಂದರು.

ಇಂತಹ ಸಂತ ಸಮ್ಮೇಳನವು ಹುಬ್ಬಳ್ಳಿಗೆ ಸೀಮಿತ ಆಗಬಾರದು. ರಾಜ್ಯ ಹಾಗೂ ದೇಶಕ್ಕೆ ಪಸರಿಸಲಿ. ರಾಷ್ಟ್ರಧರ್ಮ ಎಲ್ಲ ಕಡೆ ಆಚರಣೆಗೆ ಬರಲಿ ಎಂಬ ಸಂದೇಶವನ್ನು ಸಮಾವೇಶ ನೀಡಿದೆ ಎಂದರು.

ಕಲಬುಗಿರ್ಯ ಖಾಜಾ ಬಂದೇನವಾಜ್ ದರ್ಗಾದ ಸಜ್ಜಾದೆ ನಸೀನ್ ಅವರು ಮಾತನಾಡಿ, ಸೂಫಿ ಸಂತರು ದೇವರ ಸ್ವರೂಪವಾಗಿದ್ದಾರೆ. ಸಕಲ ಜೀವ ರಾಶಿಗಳಲ್ಲಿ ಪ್ರೀತಿ, ಪ್ರೇಮವನ್ನು ತೋರಬೇಕು ಎಂದು ಸಾರಿದ್ದಾರೆ. ಮಾನವರು ಪರಸ್ಪರ ಪ್ರೀತಿ ಹಂಚಿ ಸಹಬಾಳ್ವೆ ನಡೆಸಬೇಕು. ಇದೇ ಅವರಿಗೆ ಸಲ್ಲಿಸುವ ಗೌರವ ಎಂದರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ನಮ್ಮ ನಿಮ್ಮ ಸಂಬಂಧ ಇನ್ನೂ ಹತ್ತಿರ ಆಗಬೇಕು. ದೇಶದಲ್ಲಿ ಸಾಮಾಜಿಕ ಧಾರ್ಮಿಕ ಸಂಬಂಧ ಸೂಫಿ ಸಂತರ ಮೂಲಕ ಬೆಳೆದಿದೆ. ರಾಜ್ಯದಲ್ಲಿ
ಸರ್ಕಾರದ ಉದ್ದೇಶ ಈಡೇರಬೇಕಾದರೆ ಜನರಲ್ಲಿ ಭಾವೈಕ್ಯತೆ ಮುಂದುವರಿಯಬೇಕು. ನಾವೆಲ್ಲ ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಆಗಲೇ ಸ್ವಾತಂತ್ರ್ಯ ಕ್ಕೆ ಮಹತ್ವ ಬರುತ್ತದೆ ಎಂದರು. ಇದೀಗ ಹುಬ್ಬಳ್ಳಿಯಲ್ಲಿ ಆರಂಭವಾದ ಸಮ್ಮೇಳನ ಎಲ್ಲ ಜಿಲ್ಲೆಗೆ ಪಸರಿಸಲಿ ಎಂದರು.

ಸಚಿವ ಶಿವಾನಂದ ಪಾಟೀಲ ಮಾತನಾಡಿ, ಸೂಫಿ ಸಂತ ಸಮಾಗಮ ಆಗಬೇಕು ಎಂಬ ಆಶಯ ಎಲ್ಲರಲ್ಲಿ ಇತ್ತು. ಇದೀಗ ಕೈಗೂಡಿದೆ. ಹಿಂದೆ ಜಾತ್ಯತಿತ ದೇಶವಾಗಿದ್ದ ಭಾರತದಲ್ಲಿ ಜಾತಿ ಬೀಜ ಬಿತ್ತಿದವರು ಬ್ರಿಟಿಷರು. ದೇಶದಲ್ಲಿ ಈಗ ಯಾರೂ ಸುಖಿಯಾಗಿಲ್ಲ. ಜಾತಿ ವಿಷಬೀಜ ಕಿತ್ತು ಹಾಕಲು ಧರ್ಮ ಗುರುಗಳು ಪ್ರಯತ್ನಿಸುತ್ತಿದ್ದಾರೆ. ಮಾಜಿ ಪ್ರಧಾನಿ ವಾಜಪೇಯಿ ಅವರು ದೇಶದಲ್ಲಿ ಭಾವೈಕ್ಯತೆ ಬಗ್ಗೆ ಮಾತನಾಡಿದರು. ಆದರೆ, ಅವರ ನಂತರ ಮಾತನಾಡಿದವರು ಕಡಿಮೆ. ಈಗೆಲ್ಲ ಅಧಿಕಾರಕ್ಕಾಗಿ "ಭಾರಾ ಖೂನ್ ಮಾಫ್' ಎನ್ನುವಂತಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಸರ್ಕಾರ ಎಲ್ಲರ ಜತೆ ಇದೆ. ಮೇಲಿಂದ ಮೇಲೆ ಇಂತಹ ಸಮಾಗಮ ಆಗಬೇಕು. ಕರ್ನಾಟಕ ಇಡೀ ದೇಶಕ್ಕೆ ಮಾದರಿ ಆಗಲಿ ಎಂದರು.

ಮುಖ್ಯ ಸಚೇತಕ ಸಲೀಂ ಅಹ್ಮದ ಮಾತನಾಡಿ, ದೇಶದಲ್ಲಿ ಕೋಮು ಸಾಮರಸ್ಯದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಪ್ರೀತಿ ವಿಶ್ವಾಸದಿಂದ ಗೆಲ್ಲಬೇಕು. ಸೂಫಿ ಸಂತರು ಇದನ್ನೇ ಹೇಳಿದರು. ಇಂತಹ ನಾಡಿನಲ್ಲಿ ಸೂಫಿ ಸಂತ ಸಮ್ಮೆಳನ ಮಾಡಲಾಗಿದ್ದು, ಎಲ್ಲ ಧರ್ಮಗಳ ಗುರುಗಳು ಭಾಗಿಯಾಗಿ ಉತ್ತಮ ಸಂದೇಶ ರವಾನಿಸಿದ್ದಾರೆ ಎಂದರು.

ದೊಡ್ಡ ಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಎಲ್ಲ ಧರ್ಮ ಗುರುಗಳು ಒಂದೇ ವೇದಿಕೆಗೆ ಬಂದಿದ್ದಾರೆ. ಇದು ಸಂತೋಷದ ಕ್ಷಣ. ನಾಡಿನ ಇತಿಹಾಸ ನೋಡಿದಾಗ ಶರಣ ಸಂಸ್ಕೃತಿಯಷ್ಟೇ ಸೂಫಿ ಸಂತರು ಕಾರ್ಯ ಮಾಡಿದ್ದಾರೆ. ಸಮಾಜದಲ್ಲಿ ಶಾಂತಿ ನೆಲೆಸಲು ಶ್ರಮಿಸಿದ್ದಾರೆ ಎಂದರು.

ಮಾಜಿ ಕ್ರಿಕೆಟಿಗ ಮೊಹಮ್ಮದ ಅಜರುದ್ದೀನ್ ಮಾತನಾಡಿ, ಜಾತಿ, ಧರ್ಮದ ಹೆಸರಲ್ಲಿ ಈಗಲೂ ಕಿತ್ತಾಟ ನಡೆಯುತ್ತಿವೆ. ಇದನ್ನು ತೊಲಗಿಸಬೇಕು. ಬ್ಲಡ್ ಬ್ಯಾಂಕ್ ನಲ್ಲಿ ಇದು ಹಿಂದುವಿನ ರಕ್ತ, ಮುಸ್ಲಿಂ ರಕ್ತ ಎಂದು ಇರುವುದಿಲ್ಲ. ಆದರೂ ಧರ್ಮದ ಬಗ್ಗೆ ಮಾತನಾಡುತ್ತೇವೆ. ಎಲ್ಲ ಧರ್ಮಗಳು ಒಟ್ಟಾಗಿ ಸೇರಿ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯ ಎಂದರು.

ಶಾಸಕರಾದ ಜಿ.ಎಸ್. ಪಾಟೀಲ, ಎನ್.ಎಚ್. ಕೋನರಡ್ಡಿ ಮಾತನಾಡಿದರು.

ಶಾಸಕ ಶಾಸಕ ಗವಿಯಪ್ಪ, ರಾಜ್ಯಸಭಾ ಸದಸ್ಯ ನಾಸೀರ ಹುಸೇನ್, ಶಾಸಕ ಯಾಸೀರ್ ಖಾನ ಪಠಾಣ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಅನಿಲ ಪಾಟೀಲ, ತವನಪ್ಪ ಅಷ್ಟಗಿ, ಯೂಸೂಫ್ ಸವಣೂರ, ಚಂದ್ರಶೇಖರ ಜುಟ್ಟಲ, ಅಲ್ತಾ್ ಕಿತ್ತೂರ, ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ, ದಾದಾಹಯಾತ್ ಕೈರಾತಿ, ಷಾಜಹಾನ್ ಮುಜಾಹಿದ್, ತಾಜುದ್ದೀನ್ ಖಾದ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net