

ಶಿರಸಿ: ಶಿರಸಿ ಸಿದ್ದಾಪುರ ಕ್ಷೇತ್ರದ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಇದುವರೆಗೆ 80 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಇನ್ನೂ 14.5 ಕೋಟಿ ರೂ. ಅನುದಾನ ಬರಲಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನಗರದ ಲೋಕೋಪಯೋಗಿ ಇಲಾಖೆಗೆ ಸರ್ಕಾರದಿಂದ ಬಿಡುಗಡೆ ಆದ ಎರಡು ಜೀಪ್ ಮತ್ತು ಎರಡು ಕಾರುಗಳನ್ನು ಸೋಮವಾರ ಹಸ್ತಾಂತರಿಸಿ ಅವರು ಮಾತನಾಡಿದರು.
80 ಕೋಟಿ ರೂ. ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿವೆ. ಆದರೆ, ಮಳೆಗಾಲ ನಿರೀಕ್ಷೆಗೂ ಮುಂಚಿತವಾಗಿ ಆರಂಭಗೊಂಡಿದ್ದರಿಂದ ಕಾಮಗಾರಿಯನ್ನು ನಿಲ್ಲಿಸಲು ನಾನೇ ಸೂಚನೆ ನೀಡಿದ್ದೇನೆ. ಮಳೆಯಲ್ಲಿ ನಡೆಸುವ ಕಾಮಗಾರಿ ಸಮರ್ಪಕವಾಗಿ ಆಗದ ಕಾರಣ ಮಳೆಗಾಲ ಮುಕ್ತಾಯವಾದ ಬಳಿಕ ಈ ಕೆಲಸಗಳನ್ನು ಮುಂದುವರಿಸಲಾಗುವುದು ಎಂದರು.
ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕು ಎಂಬುದು ಸರ್ಕಾರದ ಉದ್ದೇಶ. ಪ್ರಗತಿಪಥ ಯೋಜನೆಯಲ್ಲಿ 21 ಕೋಟಿ ರೂ. ಹಣವನ್ನು ಮಂಜೂರು ಮಾಡಿದ್ದು, ವಿವಿಧೆಡೆ ಕಾಮಗಾರಿ ನಡೆದಿದೆ. ಶಿರಸಿ ಸಿದ್ದಾಪುರ ತಾಲೂಕಿನಲ್ಲಿ ಸಹಜವಾಗಿ ಮಳೆಗಾಲ ಜೂನ್ 5ರ ನಂತರ ಆರಂಭಗೊಳ್ಳುತ್ತಿತ್ತು. ಆದರೆ, ಈ ವರ್ಷ ಮೇ ಮಧ್ಯಭಾಗದಲ್ಲಿಯೇ ಆರಂಭಗೊಂಡಿರುವ ಕಾರಣ ಎಲ್ಲ ಇಲಾಖೆಗಳಿಗೂ ನಿರೀಕ್ಷೆಯಂತೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ಕೆಲ ಕೆಲಸಗಳು ಅರೆಬರೆ ಆಗಿವೆ. ಸಿದ್ದಾಪುರ ಕುಮಟಾ ರಸ್ತೆಯಲ್ಲಿ ಹೊಂಡ ಮುಚ್ಚುವ ಕಾರ್ಯ ಆರಮಭಿಸಲಾಗಿತ್ತಾದರೂ ಮಳೆಯಿಂದಾಗಿ ಸಮಸ್ಯೆ ಆಗಿದೆ. ಹೀಗಾಗಿ, ಹೊಂಡ ಗುಂಡಿಗಳು ಮತ್ತೆ ತೆರೆದುಕೊಂಡಿದ್ದು, ಶೀಘ್ರವೇ ಮುಚ್ಚುವ ಕಾರ್ಯ ನಡೆಸಲಿದ್ದೇವೆ ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಗಣೇಶ ದಾವಣಗೆರೆ ಇತರರಿದ್ದರು.