ಕಲ್ಯಾ-ಕುಂಟಾಡಿ ರಸ್ತೆಯಲ್ಲಿ ಯಾತನೆ

kalya
ಸಂಪೂರ್ಣ ಹೊಂಡಮಯವಾಗಿ ಹದಗೆಟ್ಟ ಕಲ್ಯಾ, ಮಲ್ಲಯಬೆಟ್ಟು, ಕುಂಟಾಡಿ ಸಾಗುವ ಸಂಪರ್ಕ ರಸ್ತೆ
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಕಲ್ಯಾ ಗ್ರಾಪಂ ವ್ಯಾಪ್ತಿಯ ಕುಂಟಾಡಿಯಿಂದ ಮಲ್ಲಯಬೆಟ್ಟು ಮಾರ್ಗವಾಗಿ ಕಲ್ಯಾ ಹಳೆಕಟ್ಟೆ ಗ್ರಾಮವನ್ನು ಸಂಪರ್ಕಿಸುವ ರಸ್ತೆಯುದ್ದಕ್ಕೂ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡ ಗುಂಡಿಗಳಿಂದ ಕೂಡಿದ್ದು, ಗ್ರಾಮದ ಜನರು ನಿತ್ಯ ಸರ್ಕಸ್ ಮಾಡಿಕೊಂಡು ಮನೆ ಸೇರುವುದು ಅನಿವಾರ್ಯ...

ಈ ರಸ್ತೆ ತೀರ ಹದಗೆಟ್ಟು ಹಲವು ವರ್ಷಗಳು ಕಳೆದಿದ್ದು, ಇದೀಗ ರಸ್ತೆಯಲ್ಲಿ ಜಲ್ಲಿ ಟಾರು ಎಲ್ಲವೂ ಕಿತ್ತು ಹೋಗಿ ಬೃಹತ್ ಗಾತ್ರದ ಹೊಂಡಗಳು ಮಾತ್ರ ಉಳಿದುಕೊಂಡಿವೆ. ಈ ಭಾಗದಲ್ಲಿ ಸಂಚಾರ ನಡೆಸುವ ವಾಹನ ಸವಾರರು ಹೊಂಡಕ್ಕೆ ಬಿದ್ದು ಎದ್ದು ಸಂಚಾರ ನಡೆಸುವುದು ಅನಿವಾರ್ಯವಾಗಿದೆ. ದಾರಿಹೋಕರು ಹೊಂಡದಲ್ಲಿ ನಿಂತ ಕೆಸರನ್ನು ಮೈಮೇಲೆ ಎರಚಿಕೊಂಡು ಸಾಗಬೇಕಾಗಿದೆ. ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಗ್ರಾಮಸ್ಥರು ನರಕಯಾತನೆ ಪಡುವಂತಾಗಿದೆ.

ಪ್ರಮುಖ ಸಂಪರ್ಕ ರಸ್ತೆ

ಕಲ್ಯಾ ಹಾಳೆಕಟ್ಟೆಯಿಂದ ಕುಂಟಾಡಿ ಭಾಗಕ್ಕೆ ಸಾಗುವ ರಸ್ತೆಯುದ್ದಕ್ಕೂ ನೂರಾರು ಮನೆಗಳಿವೆ. ಅಲ್ಲದೆ ಇದೇ ರಸ್ತೆಯನ್ನು ಅವಲಂಬಿಸಿಕೊಂಡು ಅಲ್ಲಿನ ಸ್ಥಳೀಯ ಸರ್ಕಾರಿ ಶಾಲೆ, ದೇವಾಲಯಗಳಿಗೆ ಹೆಚ್ಚಿನ ಜನರು ಹೋಗುತ್ತಿದ್ದು, ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ ಈ ಹಿಂದೆ ಕಲ್ಯಾದಲ್ಲಿದ್ದ ಗ್ರಾಪಂ ಕಟ್ಟಡ ಕುಂಟಾಡಿಯಲ್ಲಿ ನಿರ್ಮಾಣಗೊಂಡ ಬಳಿಕ ಕಲ್ಯಾ, ನೆಲ್ಲಿಗುಡ್ಡೆ, ಹಾಳೆಕಟ್ಟೆ ಭಾಗದ ಜನರು ಇದೇ ರಸ್ತೆಯನ್ನು ಅವಲಂಬಿಸಿಕೊಂಡು ಸರ್ಕಾರಿ ಸೇವೆಗಾಗಿ ಅಲೆದಾಡುವಂತಾಗಿದೆ. ಪಂಚಾಯಿತಿ ಕಚೇರಿ ತಲುಪಲು ಇಲ್ಲಿ ಬಸ್ ಓಡಾಟದ ವ್ಯವಸ್ಥೆ ಇಲ್ಲದೆ ಆಟೋ ರಿಕ್ಷಾ, ಬಾಡಿಗೆ ವಾಹನವನ್ನು ಅವಲಂಬಿಸಿಕೊಂಡು ಇದೇ ರಸ್ತೆಯಲ್ಲಿ ಸಂಚರಿಸುವಂತಾಗಿದೆ.

ರಸ್ತೆ ಸರಿಪಡಿಸಲು ಆಗ್ರಹ

ಈ ಭಾಗದಲ್ಲಿ ನಿತ್ಯ ನೂರಾರು ಮನೆಯ ಮಂದಿ ಕೆಲಸ ಕಾರ್ಯ, ಸ್ಥಳೀಯ ಗ್ರಾಪಂ ಸೇವೆಯನ್ನು ಪಡೆಯಲು ಸಾಗುತ್ತಿದ್ದು, ಇದೀಗ ಈ ರಸ್ತೆಗೆ ಡಾಂಬರು ಹಾಕುವುದು ಅನಿವಾರ್ಯವಾಗಿದೆ. ಗ್ರಾಮದ ಜನರ ಜೀವಹಿಂಡುತ್ತಿರುವ ಈ ರಸ್ತೆಯನ್ನು ಆದಷ್ಟು ಬೇಗ ಸರಿಪಡಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ರಸ್ತೆಯುದ್ದಕ್ಕೂ ಪೊದೆಗಳು ಆವರಿಸಿದ್ದು, ಅದನ್ನು ಕಟಾವು ಮಾಡುವಲ್ಲಿಯೂ ಸ್ಥಳೀಯಾಡಳಿತ ಕ್ರಮ ವಹಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.

ಅರ್ಧಕ್ಕೆ ನಿಂತ ಕೆಲಸ

ಹಲವು ವರ್ಷಗಳ ಹಿಂದೆ ಕಲ್ಯಾ ಮಲ್ಲಾಯಬೆಟ್ಟು ಕುಂಟಾಡಿ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗೆ ಅನುದಾನ ಮಂಜೂರುಗೊಂಡು ರಸ್ತೆಯ ಕಾಮಗಾರಿ ಆರಂಭಗೊಂಡು ಬಹುತೇಕ ಪ್ರಮಾಣದಲ್ಲಿ ಪೂರ್ಣವಾದರೂ ತೇಕಲ್ ಪಾದೆ ಬಳಿಯಿಂದ ಸುಮಾರು 1 ಕಿ.ಮೀ. ಉದ್ದದ ರಸ್ತೆಗೆ ಅರಣ್ಯ ಇಲಾಖೆಯಲ್ಲಿ ತಡೆ ಬಂದ ಹಿನ್ನೆಲೆಯಲ್ಲಿ ರಸ್ತೆಯ ಕಾಮಗಾರಿ ಮೊಟಕುಗೊಳಿಸಲಾಯಿತು. ಆ ಬಳಿಕ ನಿಂತ ಕಾಮಗಾರಿ ಇಲ್ಲಿಯವರೆಗೂ ನಡೆದಿಲ್ಲ. ಇದೀಗ ಅರ್ಧ ಕಾಮಗಾರಿ ನಡೆದ ಡಾಂಬರು ರಸ್ತೆಯ ಜಲ್ಲಿ ಟಾರು ಎಲ್ಲವೂ ಕಿತ್ತುಹೋಗಿ ಬರೀ ಮಣ್ಣಿನ ರಸ್ತೆಯಂತಾಗಿದೆ.

ಇಲ್ಲಿನ ರಸ್ತೆಯ ಸಮಸ್ಯೆ ಇಂದು ನಿನ್ನೆಯದಲ್ಲ. ಹಿಂದೆ ಕಾಮಗಾರಿ ಆರಂಭಗೊಂಡಾಗ ಅರಣ್ಯ ಇಲಾಖೆಯ ತಡೆಯಿಂದ ಅರ್ಧಕ್ಕೆ ಕಾಮಗಾರಿಯನ್ನು ಮೊಟಕುಗೊಳಿಸಲಾಯಿತು. ಇದೀಗ ಹಾಕಿದ ಡಾಂಬರು ಎಲ್ಲವೂ ಕಿತ್ತುಹೋಗಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣಗೊಂಡಿದೆ. ಈ ಭಾಗದ ರಸ್ತೆಯಲ್ಲಿ ಸಂಚಾರ ನಡೆಸುವುದೇ ಅಸಾಧ್ಯವಾಗಿದೆ. -ರಮೇಶ್, ಗ್ರಾಮಸ್ಥ ರಸ್ತೆ ತೀರ ಹದಗೆಟ್ಟಿದ್ದು ಇಲ್ಲಿನ ರಸ್ತೆಯನ್ನು ಸರಿಪಡಿಸುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಇದೀಗ ಸರ್ಕಾರ ಯಾವುದೇ ಅನುದಾನ ಬಿಡುಗಡೆಗೊಳಿಸದೆ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಗ್ರಾಮಸ್ಥರಿಗೆ ಈ ರಸ್ತೆಯ ಅಭಿವೃದ್ಧಿ ಅನಿವಾರ್ಯ. -ಪೂಜಾ ಕಲ್ಯಾ ಗ್ರಾಪಂ ಅಧ್ಯಕ್ಷೆ https://www.vijayavani.net/raghavendra-kulal-was-elected-as-the-president https://www.vijayavani.net/the-work-of-a-successful-band-is-commendable

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net