

ಹುಕ್ಕೇರಿ: ಆಧುನಿಕ ತಂತ್ರಜ್ಞ್ಞಾನ ಬಳಕೆಯಿಂದ ಸತತ ಐದು ವರ್ಷಗಳಿಂದ ಎಕರೆಗೆ 100 ಟನ್‌ಗಿಂತ ಹೆಚ್ಚು ಕಬ್ಬು ಬೆಳೆಯುತ್ತಿರುವ ಸುಧೀರ ಕತ್ತಿ ಅವರ ಕಬ್ಬು ಕೃಷಿಗೆ ಮಾದರಿಯಾಗಿದೆ ಎಂದು ಮಹಾರಾಷ್ಟ್ರದ ಕೃಷಿ ರತ್ನ ಪ್ರಶಸ್ತಿ ಪುರಸ್ಕೃತ ಡಾ.ಸಂಜೀವ ಮಾನೆ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯ ಪ್ರಗತಿಪರ ರೈತ ಸುಧೀರ ಕತ್ತಿ ಅವರು ಕಡಹಟ್ಟಿ ಜಮೀನಿನಲ್ಲಿ ಎಕರೆಗೆ 120 ಟನ್ ಕಬ್ಬು ಬೆಳೆದ ಹಿನ್ನೆಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಬ್ಬಿನ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಗತಿಪರ ರೈತ ಸುಧೀರ ಕತ್ತಿ ಮಾತನಾಡಿ, ವ್ಯಾಪಾರಿಯಾಗಿದ್ದ ನಾನು ಕೃಷಿಯತ್ತ ಆಕರ್ಷಿತನಾಗಿ ಹಲವು ಪ್ರಗತಿಪರ ರೈತರು ಹಾಗೂ ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಆರಂಭದಲ್ಲಿ ಎಕರೆಗೆ 100 ಟನ್ ಕಬ್ಬು ಬೆಳೆದೆ. ಬಳಿಕ ಇಳುವರಿ ಹೆಚ್ಚುತ್ತಾ ಪ್ರಸಕ್ತ ವರ್ಷ ಎಕರೆಗೆ 120 ಟನ್ ಕಬ್ಬ ಬೆಳೆದಿದ್ದೇನೆ. ಶುಗರ್ ಕೇನ್ ಕಲ್ಪವೃಕ್ಷ ಎಂಬ ಗ್ರೂಪ್ ರಚಿಸಿದ್ದು, ನಾಲ್ಕು ಸಾವಿರ ರೈತರು ಸದಸ್ಯರಿದ್ದಾರೆ. ಪ್ರತಿದಿನ ಕಬ್ಬಿನ ಬೆಳೆ ಕುರಿತು ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಎಂದರು.
ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಆರ್.ಬಿ.ನಾಯ್ಕರ ಮಾತನಾಡಿದರು. ಪ್ರಗತಿಪರ ರೈತ ರುದ್ರಕುಮಾರ ಹಾಲಪ್ಪನವರ, ಕೃಷಿ ವಿಜ್ಞಾನಿಗಳಾದ ಡಾ.ಮಂಜುನಾಥ ಚೌರೆಡ್ಡಿ, ಡಾ.ಆರ್.ಬಿಸುತಗುಂಡಿ, ಡಾ.ಎಸ್.ಎಸ್.ನೂಲಿ, ಎನ್.ಬಿ.ತೇರದಾಳ ಇತರರಿದ್ದರು.