ದ.ಕ ಜಿಲ್ಲೆಗೆ ನೆರವಿನ ಹಸ್ತ ಚಾಚಿದ ಸುಧಾಮೂರ್ತಿ

sudha
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ವೈರಸ್ ಭಯದ ವಾತಾವರಣ ಉಂಟು ಮಾಡಿದ್ದು, ಈಗಾಗಲೇ ಒಟ್ಟು 7 ಪ್ರಕರಣಗಳು ದೃಢಪಟ್ಟಿವೆ. ಇದನ್ನು ಮನಗಂಡ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರು ಜಿಲ್ಲೆಗೆ 28 ಲಕ್ಷ ರೂ.ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸಿ ನೆರವಿನ ಹಸ್ತ ಚಾಚಿದ್ದಾರೆ.

ರಾಜ್ಯದಲ್ಲಿ ಉಂಟಾದ ನೆರೆ ಪ್ರವಾಹ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಇನ್ಫೋಸಿಸ್ ಸಂಸ್ಥೆ ಸಮಾಜಕ್ಕೆ ನೆರವಿನ ಹಸ್ತ ಚಾಚುತ್ತ ಬಂದಿದೆ. ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ಕರೊನಾ ಚಿಕಿತ್ಸೆ ನಿರ್ವಹಣೆಗೆ ರಾಜ್ಯದ ಒಂದು ಆಸ್ಪತ್ರೆ ತಮಗೆ ವಹಿಸಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ವೈದ್ಯಕೀಯ ಸಾಮಗ್ರಿಗಳ ನೆರವಿಗಾಗಿ ದ.ಕ ಜಿಲ್ಲಾಡಳಿತದ ಪರವಾಗಿ ಮಂಗಳೂರು ಪೊಲೀಸ್ ಆಯುಕ್ತರು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರ ಬಳಿ ನೆರವು ನೀಡುವಂತೆ ವಿನಂತಿಸಿಕೊಂಡಿದ್ದರು.

ಮಾನವೀಯತೆ ಹಾಗೂ ಸಹಾಯಹಸ್ತ ಚಾಚುವುದರಲ್ಲಿ ಸದಾ ಮುಂದಿರುವ ಡಾ.ಸುಧಾಮೂರ್ತಿ ಪೊಲೀಸ್ ಇಲಾಖೆಯ ಕೋರಿಕೆಗೆ ತಕ್ಷಣ ಸ್ಪಂದಿಸಿ 36 ಗಂಟೆಯೊಳಗೆ 28 ಲಕ್ಷ ರೂ. ಗಳ ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ಜಿಲ್ಲೆಯ ಜನತೆಯ ನೆರವಿಗಾಗಿ ಕಳುಹಿಸಿದ್ದಾರೆ. ಇನ್ಫೋಸಿಸ್ ಫೌಂಡೇಶನ್‌ನ ರಾಮದಾಸ್ ಕಾಮತ್ ಹಾಗೂ ಅವರ ತಂಡ ಈ ನಿಟ್ಟಿನಲ್ಲಿ ಶ್ರಮಿಸಿದೆ.

1,65,000 ಮಾಸ್ಕ್, 5,000 ಬಾಟಲ್ ಸ್ಯಾನಿಟೈಸರ್, 85 ಗಾಗಲ್ಸ್, 3 ಬ್ಲಾಕ್ ಸರ್ಜಿಕಲ್ ಗ್ಲೌಸ್, 50 ಕ್ಯಾಪ್‌ಗಳು, 30 ಪೂರ್ತಿ ಕಾಲು ಮುಚ್ಚುವಂತ ವೈದ್ಯಕೀಯ ವಸ್ತುಗಳು, 2,000 ಎನ್ 95 ಮಾಸ್ಕ್, 300 ಫಾಗ್ ಫ್ರೀ ಮಾಸ್ಕ್, 60 ವಿಶೇಷ ಮಾದರಿಯ ಸರ್ಜಿಕಲ್ ಗ್ಲೌಸ್ ಮೊದಲಾದ ವಸ್ತುಗಳನ್ನು ಕಳುಹಿಸಿದ್ದಾರೆ. ಕರೊನಾ ವಿರುದ್ಧ ಶ್ರಮಿಸುತ್ತಿರುವ ವೈದ್ಯರು, ನರ್ಸ್‌ಗಳು, ಪೊಲೀಸರು, ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂಸೇವಕರು ಈ ವಸ್ತುಗಳನ್ನು ಬಳಸಿಕೊಳ್ಳಲಿದ್ದಾರೆ. ಮೆಡಿಕಲ್‌ಗಳಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಸ್ಟಾಕ್ ಇಲ್ಲದೆ ಸಮಸ್ಯೆಯಾಗಿತ್ತು.

ಕೃತಜ್ಞತೆ ಸಲ್ಲಿಸಿದ ಸಚಿವ, ಸಂಸದರು: ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ತುರ್ತು ಸ್ಪಂದನೆ ನೀಡಿದ ಡಾ.ಸುಧಾಮೂರ್ತಿ ಹಾಗೂ ರಾಮದಾಸ್ ಕಾಮತ್ ತಂಡಕ್ಕೆ ದ.ಕ.ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ಕೃತಜ್ಞತೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net