

ಚಿಕ್ಕಬಳ್ಳಾಪುರ: ಪದವಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತೀಯ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಸಮಿತಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಧರಣಿ ನಡೆಸಿ ಪ್ರಾಂಶುಪಾಲ ಚಂದ್ರಯ್ಯ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಹಿಂದೆ ಎಸ್‌ಸಿ ಮತ್ತು ಎಸ್‌ಟಿಗೆ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್‌ಟಾಪ್ ವಿತರಣೆಗೆ ಸರ್ಕಾರ ಮುಂದಾದಾಗ, ರಾಜ್ಯಾದ್ಯಂತ ಹೋರಾಟ ಕೈಗೊಂಡು ಎಲ್ಲ ವರ್ಗದವರಿಗೂ ಸವಲತ್ತು ಒದಗಿಸಲು ಒತ್ತಾಯಿಸಲಾಯಿತು. ಇದಕ್ಕೆ ಸರ್ಕಾರವು ಸಹ ಒಪ್ಪಿಗೆ ಸೂಚಿಸಿತ್ತು. ಆದರೆ, ಈಗ ಮೊದಲ ವರ್ಷದ ಪದವಿ ಎಲ್ಲ ವಿದ್ಯಾರ್ಥಿಗಳನ್ನು ಲಾನುಭವಿಗಳನ್ನಾಗಿ ಘೋಷಿಸಿ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳನ್ನು ಕೈಬಿಡಲಾಗಿದೆ ಎಂದು ಒಕ್ಕೂಟದ ರಾಜ್ಯ ಸಂಚಾಲಕ ಕುಂದಲಗುರ್ಕಿ ಎನ್.ಮುನೀಂದ್ರ ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಮುಖಂಡರಾದ ವಿ.ಲಕ್ಷ್ಮೀಪತಿ, ಎನ್.ಅನುಷಾ, ಎಂ.ಎಸ್.ಚೈತ್ರಾ, ಸಿ.ಎಂ.ಜಯಶ್ರೀ, ಆರ್.ಮಂಜುಳಾ, ಎಂ.ಅನುಷಾ, ವಿ.ಚೈತ್ರಾ ಇತರರಿದ್ದರು.
ಮೊದಲು ಲ್ಯಾಪ್‌ಟಾಪ್ ಕೊಡಿ : ಒಂದು ತಿಂಗಳ ಹಿಂದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಕೇತಿಕವಾಗಿ ಪ್ರಥಮ ವರ್ಷದ 7 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗಿದೆ. ಉಳಿದವರಿಗಾಗಿ ಸಚಿವ ಡಾ ಕೆ.ಸುಧಾಕರ್ ನೇತೃತ್ವದಲ್ಲಿ ನಡೆಯಲಿರುವ ಮತ್ತೊಂದು ಕಾರ್ಯಕ್ರಮದಲ್ಲಿ ಕೊಡುವುದಾಗಿ ಹೇಳಿ ವಿಳಂಬ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಪಾಕ್ ಪ್ರೇಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹ : ಹುಬ್ಬಳಿಯ ಕಾಲೇಜಿನಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿ, ಅಜಾದಿಗೆ ಒತ್ತಾಯಿಸಿದ ವಿದ್ಯಾರ್ಥಿಗಳನ್ನು ಭಾರತದಿಂದ ಗಡಿಪಾರು ಮಾಡಲು ಭಾರತೀಯ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಸಮಿತಿ ಒತ್ತಾಯಿಸಿತು.
ತಹಸೀಲ್ದಾರ್ ಕೆ.ನರಸಿಂಹಮೂರ್ತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾರ್ಯಕರ್ತರು, ದೇಶದ್ರೋಹಿಗಳ ವಿಚಾರದಲ್ಲಿ ಮೃದು ಧೋರಣೆ ತೋರದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.