ಇಡೀ ಚಿತ್ರರಂಗದ ದೂಷಣೆ ಸರಿಯಲ್ಲ ; ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಬಗ್ಗೆ ನಟ ಸುದೀಪ್ ಹೇಳಿಕೆ

01Tmk_Indrajit_Local_02
Published on

ತುಮಕೂರು: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ಇಂತಹ ವಿಷಯವನ್ನಿಟ್ಟುಕೊಂಡು ಇಡೀ ಚಿತ್ರರಂಗವನ್ನು ದೂಷಿಸುವುದು ಸರಿಯಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದರು.

ಸಿದ್ಧಗಂಗಾ ಮಠಕ್ಕೆ ಮಂಗಳವಾರ ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಜತೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದರು. ಇಂದ್ರಜಿತ್, ಸುದೀಪ್ ಒಟ್ಟಿಗೆ ಧ್ಯಾನಮಂದಿರದಲ್ಲಿ ಕೆಲಹೊತ್ತು ಪ್ರಾರ್ಥನೆ ಸಲ್ಲಿಸಿದರು.

ಡ್ರಗ್ಸ್ ಮಾಫಿಯಾ ಬಗ್ಗೆ ಸಿಸಿಬಿ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಂಡಿದ್ದ ಇಂದ್ರಜಿತ್ ಜತೆಗೆ ಶ್ರೀಮಠಕ್ಕೆ ಭೇಟಿ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಕೊಂಡಿದ್ದ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಸಮಾಧಾನದಿಂದಲೇ ಪ್ರತಿಕ್ರಿಯಿಸಿದ ಸುದೀಪ್, ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಚಿತ್ರರಂಗವನ್ನು ಎಲ್ಲ ಹಿರಿಯ ಕಲಾವಿದರು ಸೇರಿ ಕಟ್ಟಿ ಬೆಳೆಸಿದ್ದಾರೆ. ಇಂತಹ ವಿಚಾರಕ್ಕೆ ಇಡೀ ಚಿತ್ರರಂಗಕ್ಕೆ ಕಳಂಕ ಹಚ್ಚುವುದು ಸರಿಯಲ್ಲ. ನಾನು 24 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ. ಆದರೆ, ನನಗೆ ರೈಸ್, ದಾಲ್ ಗೊತ್ತು. ಡ್ರಗ್ಸ್ ಬಗ್ಗೆ ಗೊತ್ತಿಲ್ಲ. ಕನ್ನಡ ಚಿತ್ರರಂಗಕ್ಕೆ ಆಗಾಗ ಪೆಟ್ಟುಗಳು ಬೀಳುತ್ತಲೇ ಇರುತ್ತದೆ. ಅದನ್ನು ಮೆಟ್ಟಿನಿಂತು ಚೇತರಿಸಿಕೊಳ್ಳಬೇಕಿದೆ. ಈಗ ಏನೇನು ನಡೆಯುತ್ತಿದೆ ಆ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ. ಈ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಡ್ರಗ್ಸ್ ಮಾಫಿಯಾದಲ್ಲಿ ಅಗಲಿದ ನಟನ ಹೆಸರನ್ನು ಪ್ರಸ್ತಾಪ ಮಾಡುವುದು ಬೇಡ. ಅವರಿಗೆ ಕುಟುಂಬ ಇದೆ. ಸಹೋದರ, ಪತ್ನಿ, ತಂದೆ-ತಾಯಿ ಎಲ್ಲರೂ ಇದ್ದಾರೆ. ವಿನಾ ಕಾರಣ ಅವರ ಹೆಸರು ತಂದರೆ ಕುಟುಂಬಕ್ಕೆ ನೋವಾಗುತ್ತದೆ. ಖಚಿತವಲ್ಲದ ವಿಚಾರಗಳ ಬಗ್ಗೆ ಊಹಾ ಪೋಹಗಳನ್ನು ಸೃಷ್ಟಿಸಿ ಮಾತನಾಡುವುದರಿಂದ ಇಡೀ ಚಿತ್ರರಂಗಕ್ಕೆ ಕೊಡಲಿ ಪೆಟ್ಟು ಬೀಳಲಿದೆ ಎಂದರು. ನಟ ಚೇತನ್ ನನ್ನ ಬಗ್ಗೆ ಮಾತನಾಡಿರುವುದಲ್ಲ. ಗುಟ್ಕಾ ಜಾಹೀರಾತಿಗೆ ಅನುಮತಿ ಕೊಟ್ಟಿರುವ ಪ್ರಧಾನ ಮಂತ್ರಿಯವರ ಬಗ್ಗೆ ಮಾತನಾಡಿರಬಹುದು. ಏನಾದರೂ ಮಾತನಾಡುವವರು ನೇರವಾಗಿ ಮಾತನಾಡಬೇಕು ಎಂದು ತಿಳಿಸಿದರು.

ಕರೊನಾ ಸಂಕಷ್ಟ: ಕರೊನಾದಿಂದ ಚಿತ್ರರಂಗಕ್ಕೆ ತುಂಬ ನಷ್ಟವಾಗಿದೆ. ನಿರ್ಮಾಪಕರು, ನಟ, ನಟಿಯರು ಸಂಕಷ್ಟ ಅನುಭವಿಸಿದ್ದಾರೆ. ಇದೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ. ಜೀವನದಲ್ಲಿ ಎಲ್ಲರಿಗೂ ಸುಗಮ ಹಾದಿ ಇರುವುದಿಲ್ಲ. ಜೀವನದಲ್ಲಿ ಎಲ್ಲ ಸಂಕಷ್ಟ ಎದುರಿಸಿ ಸಾಗಬೇಕಾಗಿದೆ. ಆದರೆ, ಎಲ್ಲವನ್ನು ಎದುರಿಸಿ ನಮ್ಮ ಚಿತ್ರರಂಗ ನಿಂತಿದೆ. ಕರೊನಾ ಬಗ್ಗೆ 3 ತಿಂಗಳಿನಿಂದ ಇದ್ದ ಭಯ ಈಗಿಲ್ಲ. ಎಲ್ಲವನ್ನೂ ಎದುರಿಸೋಣ ಎಂದು ಸುದೀಪ್ ಹೇಳಿದರು.  ಸಿದ್ಧಗಂಗಾ ಮಠಕ್ಕೆ ಇಂದ್ರಜಿತ್ ಜತೆ ಬಂದಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಇಂದ್ರಜಿತ್ ಅವರು ನಾನು ಸಿನಿಮಾ ರಂಗಕ್ಕೆ ಬರುವ ಮೊದಲಿನಿಂದಲೂ ಪರಿಚಿತರು ಮತ್ತು ಸ್ನೇಹಿತರು. ಅವರಿಗೆ ಶ್ರೀಮಠದೊಂದಿಗೆ ಉತ್ತಮ ಒಡನಾಟವಿದ್ದು ಅವರಿಗೆ ಹುಟ್ಟುಹುಬ್ಬ ಹಿನ್ನೆಲೆಯಲ್ಲಿ ಮೊದಲೇ ಮಠಕ್ಕೆ ತೆರಳುವ ಬಗ್ಗೆ ಚರ್ಚಿಸಿದ್ದೆ. ಹಾಗಾಗಿ, ಇಬ್ಬರು ಒಟ್ಟಿಗೆ ಮಠಕ್ಕೆ ಬಂದಿದ್ದೇವೆ ಎಂದರು.

ರಾಜಕೀಯ ಪಾರ್ಟಿಗಳಿಂದ ಮಾತ್ರ : ನಾನು ಯಾವುದೇ ಪಾರ್ಟಿಗಳಿಗೆ ಹೋಗುವುದಿಲ್ಲ. ನನಗೇನಿದ್ದರೂ ಕರೆ ಬರುವುದು ರಾಜಕೀಯ ಪಾರ್ಟಿಗಳಿಂದ ಮಾತ್ರ ಎಂದು ಸುದೀಪ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕರೊನಾ ಸಂಕಷ್ಟದ ಸಮಯದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಅಭಿಮಾನಿಗಳ್ಯಾರೂ ಬುಧವಾರ ಬೆಂಗಳೂರಿಗೆ ಅಥವಾ ನಮ್ಮ ಮನೆ ಬಳಿಗೆ ಬರಬಾರದು. ಮುಂದಿನ ದಿನಗಳಲ್ಲಿ ಒಳ್ಳೆಯ ಕಾಲ ಬರುತ್ತದೆ. ಆಗ ಎಂದಿನಂತೆ ಸಂಭ್ರಮದಿಂದ ಆಚರಣೆ ಮಾಡಿಕೊಳ್ಳೋಣ. ಕಿಚ್ಚ ಸುದೀಪ್ ನಟ ಆತ್ಮೀಯ ಸ್ನೇಹಿತ ಸುದೀಪ್ ಹುಟ್ಟುಹಬ್ಬವನ್ನು ಮಹಾನ್ ಚೇತನರ ಆಧ್ಯಾತ್ಮಿಕ ಕ್ಷೇತ್ರವಾದ ಸಿದ್ಧಗಂಗಾ ಮಠದಲ್ಲಿ ಆಚರಿಸಲು ಬಂದಿದ್ದೇವೆ. ಇಂಥ ಪವಿತ್ರ ಸ್ಥಳದಲ್ಲಿ ಬೇರೆ ವಿಚಾರಗಳ ಕುರಿತು ಮಾತನಾಡುವುದಿಲ್ಲ. ಅನ್ನ, ಅಕ್ಷರ ದಾಸೋಹದ ಈ ಪುಣ್ಯ ಕ್ಷೇತ್ರದಲ್ಲಿ ಸ್ನೇಹಿತ ಸುದೀಪ್ ಅವರೊಂದಿಗೆ ಕಳೆಯುತ್ತಿರುವುದು ಒಂದು ಅದ್ಭುತ ಘಳಿಗೆ. ಶ್ರೀಮಠದಲ್ಲಿ ಡ್ರಗ್ ಮಾಫಿಯಾ ಬಗ್ಗೆ ಮಾತನಾಡುವುದಿಲ್ಲ. ಇಂದ್ರಜಿತ್ ಲಂಕೇಶ್ ಚಿತ್ರನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net