ಬಸ್ ತಡೆದು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

03 HANUR 2.
ಹನೂರಿನಲ್ಲಿ ಶಾಲಾ, ಕಾಲೇಜಿಗೆ ತೆರಳುವ ವೇಳೆ ಬಸ್ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
Published on

ಹನೂರು: ಶಾಲಾ-ಕಾಲೇಜಿಗೆ ತೆರಳುವ ವೇಳೆ ಬಸ್ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಂಗಳವಾರ ನೂರಾರು ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ಬೆಳಗ್ಗೆ 8.30ರಲ್ಲಿ ಕೊಳ್ಳೇಗಾಲದ ಶಾಲಾ, ಕಾಲೇಜುಗಳಿಗೆ ತೆರಳುವ ನೂರಾರು ವಿದ್ಯಾರ್ಥಿಗಳು ಪಟ್ಟಣದ ಬಸ್ ನಿಲ್ದಾಣದಲ್ಲಿ ನೆರೆದಿದ್ದರು. ಆದರೆ ಮಹದೇಶ್ವರ ಬೆಟ್ಟದಿಂದ ಆಗಮಿಸುವ ಎಲ್ಲ ಬಸ್‌ಗಳು ಕಿಕ್ಕಿರಿದು ತುಂಬಿದ್ದವು. ಇತ್ತ ರಾಮಾಪುರ, ಶಾಗ್ಯ ಹಾಗೂ ಇನ್ನಿತರ ಕಡೆಗಳಿಂದ ಬರುತ್ತಿದ್ದ ಬಸ್‌ಗಳು ಸಹ ಪ್ರಯಾಣಿಕರಿಂದ ಭರ್ತಿಯಾಗಿದ್ದವು. ಇದರಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ತೆರಳಲು ಸುಮಾರು 1 ಗಂಟೆ ಬಸ್ ನಿಲ್ದಾಣದಲ್ಲೇ ಕಾದು ನಿಂತರೂ ಬಸ್‌ಗಾಗಿ ಪರದಾಡಿದರು. ಬಸ್ ಸೌಕರ್ಯ ಕಲ್ಪಿಸುವಂತೆ ಸಂಚಾರ ನಿಯಂತ್ರಣಾಧಿಕಾರಿ ಅವರನ್ನು ಸಂಪರ್ಕಿಸಿದಾಗ ಇಲ್ಲಸಲ್ಲದ ಕಾರಣ ನೀಡಿದರು. ಇದರಿಂದ ಬೇಸತ್ತ ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಎಎಸ್‌ಐಗಳಾದ ಶಿವಕುಮಾರ್, ಶಿವರಾಜು ಹಾಗೂ ಪೊಲೀಸ್ ಸಿಬ್ಬಂದಿ ವಿದ್ಯಾರ್ಥಿಗಳ ಮನವೊಲಿಸರು ಮುಂದಾದರು.

ಈ ವೇಳೆ ವಿದ್ಯಾರ್ಥಿಗಳು ಮಾತನಾಡಿ, ಸಮರ್ಪಕ ಬಸ್ ಸೌಕರ್ಯ ಕಲ್ಪಿಸುವಂತೆ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಸಾರಿಗೆ ಅಧಿಕಾರಿಗಳು ಭರವಸೆ ನೀಡುತ್ತಾರೆ. ಆದರೆ ಬಸ್ ಸಮಸ್ಯೆ ಆಗಾಗ್ಗೆ ಮರುಕಳಿಸುತ್ತಲೇ ಇದೆ. ಅಲ್ಲದೆ ಇದೀಗ ಮಹಿಳೆಯರಿಗೆ ಉಚಿತ ಬಸ್ ಸೌಕರ್ಯ ಕಲ್ಪಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮ.ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಪರಿಣಾಮ ಬಸ್‌ಗಳು ಕಿಕ್ಕಿರಿದು ತುಂಬಿರುತ್ತವೆ. ಇದರಿಂದ ಶಾಲಾ-ಕಾಲೇಜಿಗೆ ತೆರಳಲು ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಇತ್ತ ಸಾರಿಗೆ ನಿಯಂತ್ರಣಾಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕಾಗಮಿಸಿದ ಕೊಳ್ಳೇಗಾಲ ಬಸ್ ಡಿಪೋ ವ್ಯವಸಾಪ್ಥಕ ಮುತ್ತುರಾಜು ಮಾತನಾಡಿ, ದಿಢೀರ್ ಪ್ರತಿಭಟನೆ ಮಾಡುವುದು ಸರಿಯಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಈಗಾಗಲೇ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್ ಸೌಕರ್ಯ ಕಲ್ಪಿಸಲಾಗಿದೆ. ಆದರೆ ಮ.ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕೆಲವು ದಿನಗಳಲ್ಲಿ ಮಾತ್ರ ಸ್ವಲ್ಪ ಸಮಸ್ಯೆಯಾಗಿದೆಯಷ್ಟೇ. ಹೊಸ ಬಸ್‌ಗಳು ಘಟಕ್ಕಕೆ ಆಗಮಿಸುವುದರಿಂದ 2 ತಿಂಗಳೊಳಗೆ ಈ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಜತೆಗೆ ಬಸ್ ನಿಲ್ದಾಣದಲ್ಲಿ ಇಬ್ಬರು ಸಂಚಾರ ನಿಯಂತ್ರಣಾಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು. ಆದರೂ ಇದಕ್ಕೊಪ್ಪದ ವಿದ್ಯಾರ್ಥಿಗಳು ಮಾತಿನ ಚಕಮಕಿ ನಡೆಸಿದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳನ್ನು ಮನವೊಲಿಸಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಿಂದಾಗಿ ಮ.ಬೆಟ್ಟದಿಂದ ತಮ್ಮ ಊರುಗಳಿಗೆ ತೆರಳುತ್ತಿದ್ದ ಹೆಚ್ಚಿನ ಭಕ್ತರು ಪಟ್ಟಣದ ಬಸ್ ನಿಲ್ದಾಣದಲ್ಲಿ ಕಿರಿಕಿರಿ ಅನುಭವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net