

ಬೇಲೂರು: ಹಾಸನ-ಚಿಕ್ಕಮಗಳೂರಿನ ವಿವಿಧ ಕಾಲೇಜುಗಳಿಗೆ ತೆರಳಲು ಸರಿಯಾದ ಸಮಯಕ್ಕೆ ಬಸ್‌ಗಳನ್ನು ಬಿಡದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ನಡೆ ಖಂಡಿಸಿ ಶುಕ್ರವಾರ ವಿದ್ಯಾರ್ಥಿಗಳು ಸಾರ್ವಜನಿಕರೊಂದಿಗೆ ಸೇರಿ ನಿಲ್ದಾಣದಲ್ಲಿ ಬಸ್‌ಗಳನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.
ಬೇಲೂರು ಪಟ್ಟಣ ಸಮೀಪದಲ್ಲೇ ಬಸ್ ಡಿಪೋ ಇದ್ದರೂ ನಿತ್ಯ ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ಬಿಡದ ಕಾರಣ ಹಾಸನ-ಚಿಕ್ಕಮಗಳೂರಿಗೆ ಬೆಳಗಿನ ಸಮಯದಲ್ಲಿ ಪ್ರಯಾಣಿಸುವ ಸಾರ್ವಜನಿಕರು, ಉನ್ನತ ವ್ಯಾಸಂಗಕ್ಕಾಗಿ ತೆರಳುವ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ವಿವಿಧ ಇಲಾಖೆಗಳಿಗೆ ಕೆಲಸಕ್ಕೆ ತೆರಳುವವರು ಪರದಾಡುವಂತಾಗಿದೆ. ದಿನ ಬೆಳಗ್ಗೆ 7ಗಂಟೆಯಿಂದ 8 ಗಂಟೆವರೆಗೆ ಬೇಲೂರಿನಿಂದ ಹಾಸನ-ಚಿಕ್ಕಮಗಳೂರಿಗೆ ಸರಿಯಾದ ಬಸ್‌ಗಳ ವ್ಯವಸ್ಥೆ ಇಲ್ಲದ ಕಾರಣ ಕಾಲೇಜುಗಳಲ್ಲಿನ ಪಾಠ, ಪ್ರವಚನಗಳಿಂದ ವಿದ್ಯಾರ್ಥಿಗಳು ವಂಚಿತರಾಗುವಂತಾಗಿದೆ. ಈ ವಿಚಾರವಾಗಿ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಯನ್ನು ಕೇಳಿದರೆ ಅವರು ಬಸ್‌ಗಳ ಕೊರತೆ ಇದೆ. ನಿಮಗೆ ಬೇಕಾದ ಸಮಯದಲ್ಲಿ ಬಸ್‌ಗಳನ್ನು ಬಿಡಲು ಸಾಧ್ಯವಿಲ್ಲ ಎಂಬ ಉಡಾಫೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.
ಬೇಲೂರು ಬಸ್ ಡಿಪೋ ವ್ಯವಸ್ಥಾಪಕರನ್ನು ಕೇಳಿದರೆ ಮೇಲಧಿಕಾರಿಗಳನ್ನು ಕೇಳಿ ಎನ್ನುತ್ತಾರೆ. ಜತೆಗೆ ಕೆಲ ಬಸ್‌ಗಳಲ್ಲಿ ಬಸ್ ಪಾಸ್ ಹೊಂದಿದ್ದರೂ ವಿದ್ಯಾರ್ಥಿಗಳನ್ನು ಬಸ್‌ನಿಂದ ಕೆಳಗಿಳಿಸಿರುವ ಸಾಕಷ್ಟು ಘಟನೆಗಳು ನಡೆದಿದ್ದು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ.ರಾಜ್‌ಕುಮಾರ್ ಸಂಘದ ಅಧ್ಯಕ್ಷ ತೀರ್ಥಂಕರ್ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದಕ್ಕೆ ಬಸ್‌ಗಳನ್ನು ಸರ್ಕಾರ ಬಿಟ್ಟಿರುವುದು. ಆದರೆ ಅಧಿಕಾರಿಗಳ ಕಳ್ಳಾಟದಿಂದ ಇಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಬೇಕಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸದಿದ್ದರೆ ವಿವಿಧ ಸಂಘಟನೆಗಳೊಂದಿಗೆ ಬೇಲೂರು ಬಸ್ ಡಿಪೋ ಹಾಗೂ ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳಾದ ಹೇಮಂತ್, ವೇದಮೂರ್ತಿ, ವಿಕಾಸ್, ಆಕಾಶ್, ಸೃಷ್ಟಿ, ಯಶವಂತ್, ಶರತ್, ರಾಘು, ಆರೀಫ, ಸಾಮಾಜಿಕ ಹೋರಾಟಗಾರ ವೆಂಕಟೇಶ್ ಇತರರು ಇದ್ದರು.
ಸ್ಥಳೀಯರು ಮೊಬೈಲ್‌ನಲ್ಲಿ ಶಾಸಕ ಎಚ್.ಕೆ.ಸುರೇಶ್ ಅವರನ್ನು ಸಂಪರ್ಕಿಸಿ ಸಮಸ್ಯೆ ಕುರಿತು ವಿವರಿಸಿದ್ದರಿಂದ ಶಾಸಕರು ತಕ್ಷಣ ಮೊಬೈಲ್‌ನಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು.
ಪ್ರತಿದಿನ ಹಾಸನ-ಚಿಕ್ಕಮಗಳೂರಿಗೆ 7 ರಿಂದ 8 ಗಂಟೆಯವರೆಗೆ ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಸಾರಿಗೆ ಸಚಿವರಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಸಿದ ಬೆನ್ನಲ್ಲೇ ಎರಡು ಬಸ್‌ಗಳು ನಿಲ್ದಾಣಕ್ಕೆ ಬಂದಿದ್ದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರತಿಭಟನೆ ಕೈಬಿಟ್ಟು ತೆರಳಿದರು.
ಅಧಿಕಾರಗಳ ವಿರುದ್ಧ ಆಕ್ರೋಶ
ಹಾಸನ-ಚಿಕ್ಕಮಗಳೂರು ಕಾಲೇಜುಗಳಲ್ಲಿ ಶುಕ್ರವಾರ ಪರೀಕ್ಷೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬೇಗ ಕಾಲೇಜಿಗೆ ತೆರಳಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳು ಬಸ್ ನಿಲ್ದಾಣಕ್ಕೆ ಬಂದು ಗಂಟೆಗಟ್ಟಲೇ ಕಾದರೂ ಬಸ್‌ಗಳಿರಲಿಲ್ಲ. ಬಂದ ಒಂದೆರಡು ಬಸ್‌ಗಳಲ್ಲಿ ನಿಲ್ಲಲು ಜಾಗ ಇಲ್ಲದಷ್ಟು ಜನರು ತುಂಬಿದ್ದರು. ಈ ವಿಚಾರವಾಗಿ ಈ ಹಿಂದೆಯೇ ವಿದ್ಯಾರ್ಥಿಗಳು ಬೇಲೂರು ಬಸ್ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪರೀಕ್ಷೆ ಬರೆಯದಿದ್ದರೆ ಭವಿಷ್ಯಕ್ಕೆ ಕಲ್ಲು ಬೀಳುತ್ತದೆ ಎಂದು ಬೇಸತ್ತ ವಿದ್ಯಾರ್ಥಿಗಳು ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಿದರೂ ಸ್ಥಳಕ್ಕೆ ಡಿಪೋ ವ್ಯವಸ್ಥಾಪಕರಾಗಲಿ, ಹಿರಿಯ ಅಧಿಕಾರಿಗಳು ಬಾರದಿದ್ದರಿಂದ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಚಿತ್ರ:24(ಬಿಎಲ್‌ಆರ್)1-
ಸರಿಯಾದ ಸಮಯಕ್ಕೆ ಬಸ್‌ಗಳನ್ನು ಬಿಡದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಬೇಲೂರು ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.