

ಬೆಂಗಳೂರು : ನಗರದ ಹಲವು ಭಾಗಗಳಲ್ಲಿ ಇಂದು ಮಧ್ಯಾಹ್ನ ಜೋರು ಶಬ್ದವೊಂದು ಕೇಳಿಬಂತು. ಸುಮಾರು 12.30 ರ ನಂತರ ಕೇಳಿಬಂದ ಈ ಶಬ್ದದ ಬಗ್ಗೆ ಅನೇಕ ನಿವಾಸಿಗಳು ಟ್ವಿಟರ್ನಲ್ಲಿ ಶೇರ್ ಮಾಡಿ ಚರ್ಚೆ ನಡೆಸಿದರು.
ನೆಟ್ಟಿಗರ ಪ್ರಕಾರ, ಈ ದಿಢೀರಾದ ಜೋರು ಶಬ್ದವು ಸರ್ಜಾಪುರ, ಜೆಪಿ ನಗರ, ಬೆನ್ಸನ್ ಟೌನ್, ಅಲ್ಸೂರು, ಇಸ್ರೋ ಲೇಔಟ್, ಎಚ್ಎಸ್ಆರ್ ಲೇಔಟ್ ಮತ್ತು ಬೆಂಗಳೂರಿನ ದಕ್ಷಿಣ ಮತ್ತು ಪೂರ್ವ ಭಾಗದ ಇತರ ಕೆಲವು ಪ್ರದೇಶಗಳಲ್ಲಿ ಕೇಳಿಬಂದಿದೆ.
ಕಳೆದ ವರ್ಷ ಮೇನಲ್ಲಿ ಇದೇ ರೀತಿ ಶಬ್ದ ಕೇಳಿಬಂದಿದ್ದನ್ನು ಹಲವು ಟ್ವಿಟರ್ ಬಳಕೆದಾರರು ನೆನಪಿಸಿಕೊಂಡಿದ್ದಾರೆ. ಆಗ ಇಂಡಿಯನ್ ಏರ್ ಫೋರ್ಸ್ನ ಸುಖೋಯಿ 30 ಜೆಟ್ ಹಾದುಹೋದ ಶಬ್ದವಾಗಿತ್ತು ಎಂಬುದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಇದು ಮತ್ತೊಂದು 'ಸಾನಿಕ್ ಬೂಮ್' ಆಗಿರಬಹುದೇ ಎಂದು ಟ್ವೀಟ್ ಮೂಲಕ ಅನುಮಾನ ವ್ಯಕ್ತಪಡಿಸಿದ್ದಾರೆ.
ಕೆಲವೆಡೆಗಳಲ್ಲಿ ಶಬ್ದ ಕೇಳದಿದ್ದರೂ, ಬರೀ ಕಿಟಕಿಗಳು ಅಲುಗಾಡಿದ್ದರೆ, ಮತ್ತೆ ಹಲವೆಡೆ ಭಾರೀ ಶಬ್ದದೊಂದಿಗೆ ಕಿಟಕಿ ಗಾಜುಗಳು ಅಲುಗಾಡಿದವು ಎಂದು ಟ್ವೀಟ್ ಮಾಡಲಾಗಿದೆ. ಆದರೆ, ತನ್ನ ಯಾವುದೇ ವಿಮಾನಗಳು ಈ ಶಬ್ದ ಉಂಟುಮಾಡಿಲ್ಲ ಎಂದು ಹೆಚ್ಎಎಲ್ ಸುದ್ದಿಗಾರರಿಗೆ ಹೇಳಿದೆ ಎನ್ನಲಾಗಿದೆ. (ಏಜೆನ್ಸೀಸ್)