

ಅನ್ಸಾರ್ ಇನೋಳಿ ಉಳ್ಳಾಲ
ಇನ್ಮುಂದೆ ಪರಿಸರ ದಿನ, ವನಮಹೋತ್ಸವ ಹೆಸರಲ್ಲಿ ಉಚಿತ ಗಿಡಗಳ ವಿತರಣೆಗೆ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಬಂದಿದೆ. ಗಿಡಗಳ ದರದಲ್ಲಿ ಏಕಾಏಕಿ ಏರಿಕೆಯಾಗಿರುವುದು ಇದಕ್ಕೆಲ್ಲ ಮುಖ್ಯ ಕಾರಣ.
ಜೂನ್‌ಬಂತೆಂದರೆ ಎಲ್ಲೆಡೆ ವನಮಹೋತ್ಸವ ಅಬ್ಬರ ಶುರುವಾಗುತ್ತದೆ. ಶಾಲೆ, ಕಾಲೇಜುಗಳು, ಸಾರ್ವಜನಿಕ ಸ್ಥಳ, ಸಂಘ- ಸಂಸ್ಥೆಗಳಲ್ಲೂ ವನಮಹೋತ್ಸವ ಆರಂಭವಾಗುತ್ತದೆ. ಕಾರ್ಯಕ್ರಮ ಪ್ರಯುಕ್ತ ಕೆಲವು ಗಿಡಗಳನ್ನು ನೆಡುವುದು, ಅತಿಥಿಗಳು, ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸುವುದು ಸಾಮಾನ್ಯ. ಅರಣ್ಯ ಇಲಾಖೆ ಚಿಲ್ಲರೆ ಹಣದಲ್ಲಿ ಗಿಡಗಳನ್ನು ನೀಡುತ್ತಿದ್ದ ಕಾರಣ ಅದರ ಮಹತ್ವ ಸಾರ್ವಜನಿಕರಿಗೆ ಗೊತ್ತಾಗುತ್ತಿರಲಿಲ್ಲ. ಚಿಲ್ಲರೆ ಹಣಕ್ಕೆ ಗಿಡಗಳು ಸಿಗುತ್ತಿದ್ದುದರಿಂದ ಖರೀದಿಸಿ ವಿತರಿಸುವವರು, ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸುವವರ ಕೊರತೆಯೂ ಇರಲಿಲ್ಲ. ನೂರಾರು ಗಿಡಗಳನ್ನು ಖರೀದಿಸಿ ಪುಕ್ಕಟ್ಟೆಯಾಗಿ ವಿತರಿಸಿ ಉದಾರತೆ ಮೆರೆಯುತ್ತಿದ್ದರು. ಆದರೆ ಇನ್ನು ಮುಂದಕ್ಕೆ ಅಂಥ ಉದಾರಿಗಳನ್ನು ಕಾಣಲು ಸಾಧ್ಯವಾಗದು. ಯಾಕೆಂದರೆ ಗಿಡಗಳ ದರದಲ್ಲಿ ದಿಢೀರ್ ಏರಿಕೆಯಾಗಿದೆ. ಇದುವರೆಗೆ ಅರಣ್ಯ ಇಲಾಖೆಯಿಂದ ಒಂದು ರೂಪಾಯಿಗೆ ನೀಡಲಾಗುತ್ತಿದ್ದ ಗಿಡದ ಈಗಿನ ದರ ಏಳು ರೂಪಾಯಿ ಆಗಿದೆ. ಇನ್ನು ಮೂರು ರೂಪಾಯಿಗೆ ನೀಡಲಾಗುತ್ತಿದ್ದ ಗಿಡದ ದರ ಏಕಾಏಕಿ 20 ರೂಪಾಯಿ ಏರಿಸಲಾಗಿದ್ದು ಪ್ರಸ್ತುತ ದರ 23 ರೂ. ಆಗಿದೆ. ಗಿಡದ ದರ ದುಬಾರಿ ಆಗಿರುವುದರಿಂದ ಗಿಡ ಹಂಚುವವರು, ವನಮಹೋತ್ಸವ ಆಚರಿಸಿ ಗಿಡ ನೆಡುವವರ ಸಂಖ್ಯೆ ಕ್ಷೀಣಿಸುವ ನಿರೀಕ್ಷೆ ಇದೆ.
ದರ ಏರಿಕೆ ವಿಚಾರದಲ್ಲಿ ಲಾಭ ನಷ್ಟದ ಲೆಕ್ಕಾಚಾರವೂ ಇದೆ. ಗಿಡಗಳನ್ನು ಯಾವ ದರಕ್ಕೆ ಮಾರಾಟ ಮಾಡಬೇಕು ಎನ್ನುವ ತೀರ್ಮಾನ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಡುತ್ತಾರೆ. ಜೂನ್‌ನಿಂದ ಮಾರಾಟ ಆರಂಭವಾಗುತ್ತದೆ. ಇದುವರೆಗೆ 812 ಗಿಡಗಳನ್ನು ಮೂರು ರೂಪಾಯಿಗೆ ನೀಡಲಾಗುತ್ತಿದ್ದರೆ, ಈ ವರ್ಷ 23ಕ್ಕೇರಿಸಲಾಗಿದೆ. 69 ಒಂದು ರೂಪಾಯಿ ಬದಲು ಆರು ರೂಪಾಯಿಗೆ ಏರಿಸಲಾಗಿದೆ. ಇದುವರೆಗೆ ಉತ್ಪಾದನಾ ವೆಚ್ಚಕ್ಕಿಂತ ಅತ್ಯಂತ ಕಡಿಮೆ ದರದಲ್ಲಿ ಗಿಡಗಳನ್ನು ನೀಡುತ್ತಿದ್ದ ಕಾರಣ ಗಿಡಗಳ ದುರುಪಯೋಗ ಆಗಿ ಅರಣ್ಯ ಇಲಾಖೆಗೆ ನಷ್ಟ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ದರ ಪರಿಷ್ಕರಿಸಲಾಗಿದೆ.
812 ಗಿಡವೊಂದಕ್ಕೆ ಉತ್ಪಾದನಾ ವೆಚ್ಚ 39ರೂ. 20 ಪೈಸೆ ಆಗಿದ್ದು, ಅದರಲ್ಲಿ ಶೇ.30 ದರ ಕಡಿತಗೊಳಿಸಿ 23 ನಿಗದಿಪಡಿಸಲಾಗಿದೆ. 69ಗಿಡಕ್ಕೆ 12ರೂಪಾಯಿ 88 ಪೈಸೆ ಖರ್ಚಾಗುತ್ತಿದ್ದು ಶೇ.50 ಕಡಿತಗೊಳಿಸಿ ಆರು ರೂಪಾಯಿ ದರ ನಿಗದಿಪಡಿಸಲಾಗಿದೆ. ಈ ವರ್ಷ 25 ಸಾವಿರ 812 ಹಾಗೂ 50 ಸಾವಿರ 69 ಗಿಡಗಳನ್ನು ಬೆಳೆಸಲಾಗಿದೆ. ಜೂನ್ ಆರಂಭದ ಬಳಿಕ ಇದುವರೆಗೆ ಶೇ.30 ಮಾರಾಟವಾಗಿದೆ. ಆದರೆ ಹಿಂದಿನ ವರ್ಷ ಈ ಅವಧಿಯಲ್ಲಿ ಶೇ.70 ರಷ್ಟು ಗಿಡಗಳ ಮಾರಾಟ ಆಗಿದ್ದವು. ರೈತರು ಮತ್ತು ಸಾರ್ವಜನಿಕರಿಗೆ ದರ ರಿಯಾಯಿತಿ ಇದ್ದರೆ, ವಾಣಿಜ್ಯ ಬಳಕೆಗೆ ಉತ್ಪಾದನಾ ವೆಚ್ಚ ಸಂಪೂರ್ಣ ಭರಿಸಬೇಕು. ರೈತರಿಗೆ ಒಂದು ಗಿಡ ನೆಡಲು 1.20 ರೂ.ನಂತೆ ಮೂರು ವರ್ಷ ಪ್ರೋತ್ಸಾಹಧನ ಸಿಗುವುದರಿಂದ ದರ ಏರಿಕೆಯಾದರೂ ಖರೀದಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಮಾರಾಟ ಆಗುವ ನಿರೀಕ್ಷೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ನೀಡುತ್ತಿದ್ದ ಗಿಡಗಳ ದರ ಏಕಾಏಕಿ ಏರಿಸಲಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಗಿಡಗಳ ಖರೀದಿಗೆ ಜನರು ಹಿಂದೇಟು ಹಾಕುವ ಆತಂಕ ಇದೆ. ಪರಿಸರ ಪರ ಕೆಲಸ ಮಾಡುವವರಿಗಂತೂ ದರ ಏರಿಕೆಯಿಂದ ಗಂಭೀರ ಪರಿಣಾಮ ಎದುರಾಗಿದೆ.- ಮಾಧವ ಉಳ್ಳಾಲ್, ಪರಿಸರ ಪ್ರೇಮಿ
ಇದುವರೆಗೆ ಉತ್ಪಾದನಾ ವೆಚ್ಚಕ್ಕಿಂತ ಅತ್ಯಂತ ಕನಿಷ್ಠ ದರದಲ್ಲಿ ಗಿಡಗಳನ್ನು ನೀಡಲಾಗುತ್ತಿದ್ದರೆ, ಈ ವರ್ಷ ಉತ್ಪಾದನಾ ವೆಚ್ಚ ಆಧರಿಸಿ ಶೇ.30 ಮತ್ತು ಶೇ.50 ರಿಯಾಯಿತಿಯಲ್ಲಿ ದರ ನಿಗದಿಪಡಿಸಲಾಗಿದೆ. ಇದರಿಂದಾಗಿ ಅಗತ್ಯ ಇರುವವರು ಮಾತ್ರ ಗಿಡಗಳನ್ನು ಖರೀದಿಸುವ ಜತೆಗೆ ಗಿಡಗಳ ಮಹತ್ವ ಅರಿತು ದುರುಪಯೋಗ ನಿಲ್ಲಲಿದೆ.- ಪ್ರಶಾಂತ್ ಪೈ, ವಲಯ ಅರಣ್ಯಾಧಿಕಾರಿ https://www.vijayavani.net/%e0%b2%ae%e0%b2%b0-%e0%b2%ac%e0%b3%86%e0%b2%b3%e0%b3%86%e0%b2%b8%e0%b3%81%e0%b2%b5%e0%b3%81%e0%b2%a6%e0%b2%b0%e0%b3%8a%e0%b2%82%e0%b2%a6%e0%b2%bf%e0%b2%97%e0%b3%86-%e0%b2%95%e0%b3%86%e0%b2%b0%e0%b3%86