ಬಡವರಿಗೆ ಕಣ್ಣೀರು ತರಿಸಿದ ಏಕಾಏಕಿ ಮನೆ ತೆರವು ಕಾರ್ಯಾಚರಣೆ

IMG-20240524-WA0137
Published on

ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಹಿರೇಬಿದನೂರು ಗ್ರಾ.ಪಂ ಹಿಂಭಾಗ ಹಲವು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದವರನ್ನು ತೆರವುಗೊಳಿಸಲಾಯಿತು.

ಸುಮಾರು 20 ಮಂದಿ ನಿರ್ಗತಿಕರು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡು ದಶಕಗಳಿಂದ ವಾಸಿಸುತ್ತಿದ್ದರು. ಶುಕ್ರವಾರ ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ನೇತೃತ್ವದ ತಂಡ ಪೊಲೀಸ್ ಬಂದೋಬಸ್ತ್ನಲ್ಲಿ ತೆರಳಿ ತೆರವು ಕಾರ್ಯಚಾರಣೆ ನಡೆಸಿತು. ಮೊದಲಿಗೆ ಐದು ಮನೆ ಜತೆಗೆ ಐದು ಅಂಗಡಿಗಳನ್ನು ತೆರವುಗೊಳಿಸಲಾಗಿದ್ದು, ಉಳಿದವರಿಗೆ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಸೋಮವಾರದವರೆಗೆ ಕಾಲಾವಕಾಶ ನೀಡಲಾಗಿದೆ.

*ಬಡವರ ಕಣ್ಣೀರು*

ನಮಗೆ ವಾಸಿಸಲು ಜಾಗವಿಲ್ಲದ ಕಾರಣ ಇಲ್ಲಿ ತಾತ್ಕಾಲಿಕವಾಗಿ ಸಣ್ಣ ಗೂಡಿನಂತಹ ಮನೆಗಳನ್ನು ನಿರ್ಮಿಸಿಕೊಂಡು ಹಲವು ವರ್ಷಗಳಿಂದ ವಾಸಿಸುತ್ತಿದ್ದೇವೆ. ಆದರೆ ಈಗ ಕನಿಷ್ಠ ನೋಟೀಸ್ ಕೂಡ ಜಾರಿಗೊಳಿಸದೆ ನಮ್ಮನ್ನು ಏಕಾಏಕಿ ತೆರವುಗೊಳಿಸಲಾಗುತ್ತಿದೆ. ನಮ್ಮ ಮನೆಗಳನ್ನು ಕೆಡವಲಾಗಿದೆ. ಈಗ ನಾವು ಬೀದಿಪಾಲಾಗಿದ್ದೇವೆ. ನಾವು ಎಲ್ಲಿಗೆ ಹೋಗುವುದು? ಎಂದು ನಿರಾಶ್ರಿತರು ಕಣ್ಣೀರಿಟ್ಟರು.

* ಗೌರಿಬಿದನೂರು ನಗರದ ಹಿರೇಬಿದನೂರು ಗ್ರಾ.ಪಂ ಹಿಂಭಾಗದಲ್ಲಿ ಮನೆ ಇಲ್ಲದ ನಿರ್ಗತಿಕರ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರಿಗೆ ಸರ್ಕಾರದಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.

ಮಹೇಶ್.ಎಸ್.ಪತ್ರಿ, ತಹಸೀಲ್ದಾರ್, ಗೌರಿಬಿದನೂರು

*ನನಗೆ ಪತಿ ಇಲ್ಲ. ನಮಗೆ ಹೇಳದೆ ಕೇಳದೆ ಖಾಲಿ ಮಾಡಿಸಿದರೆ ನಾವು ಏನು ಮಾಡುವುದು. ನಾನು ಮಕ್ಕಳನ್ನು ಕರೆದುಕೊಂಡು ಎಲ್ಲಿ ಹೋಗಲಿ. ನಮಗೆ ಸಹಾಯ ಮಾಡುವವರೇ ಇಲ್ಲ. ಬಾಡಿಗೆ ಮನೆ ಮಾಡಿಕೊಳ್ಳುವುದು ಕೂಡ ನಮಗೆ ಕಷ್ಟವಾಗಿದೆ.

ಕುಬ್ರಾನ್, ಸ್ಥಳೀಯವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net