

ಯಲ್ಲಾಪುರ: ಪ್ರತಿಭಟನಾ ನಿರತರಾದ ಸಿದ್ದಿ ಸಮುದಾಯದವರ ಸಂಜೆವರೆಗೂ ಮನವೊಲಿಸಲು ಅಧಿಕಾರಿಗಳು ಯತ್ನಿಸಿದರು. ಆರೋಪಿಯ ಬಂಧನದವರೆಗೂ ಶವ ಪಡೆಯಲು ಒಪ್ಪದ ಪ್ರತಿಭಟನಾಕಾರರು ಸಂಜೆಯ ವೇಳೆಗೆ ಶವ ಸಂಸ್ಕಾರ ನಡೆಸಲು ಒಪ್ಪಿಗೆ ಸೂಚಿಸಿದರು. ಆರೋಪಿಯ ಬಂಧನವಾಗುವವರೆಗೂ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ, ಡಿವೈಎಸ್ಪಿ ಎಂ.ಎಸ್. ಪಾಟೀಲ, ತಹಸೀಲ್ದಾರ್ ಎಂ.ಗುರುರಾಜ ನೇತೃತ್ವದಲ್ಲಿ ತಹಸೀಲ್ದಾರ ಕಚೇರಿಯಲ್ಲಿ ಮೃತ ಯುವಕನ ತಂದೆ ಪ್ರಕಾಶ ಕಕ್ಕೇರಿಕರ್ ಹಾಗೂ ಕೆಲ ಸಿದ್ದಿ ಮುಖಂಡರ ಜತೆ ಸಭೆ ನಡೆಸಿದರು.
ಶಾಸಕ ಆರ್.ವಿ. ದೇಶಪಾಂಡೆ ಅವರು ಕರೆ ಮಾಡಿ, ಮೃತ ಯುವಕನ ತಂದೆಯೊಂದಿಗೆ ಮಾತನಾಡಿದರು. ಶವ ಸಂಸ್ಕಾರ ಮಾಡಿ, ನಂತರ ಪ್ರತಿಭಟನೆ ಮುಂದುವರಿಸಿ. ಆರೋಪಿಯನ್ನು ಬಂಧಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರತಿಕ್ರಿಯಿಸಿದ ಪ್ರಕಾಶ, ಪ್ರತಿಭಟನಾನಿರತರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ತಿಳಿಸಿದರು. ಹೊರಗೆ ಬಂದು ವಿಚಾರ ತಿಳಿಸಿದಾಗ ಸಮುದಾಯದ ಜನರು ಒಪ್ಪಲಿಲ್ಲ.
ಇದೇ ವೇಳೆ ಜಾತಿ ನಿಂದನೆ ಪ್ರಕರಣದ ಅಡಿ ಮೃತ ಯುವಕನ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ 50 ಸಾವಿರ ರೂ ಪರಿಹಾರಧನದ ಚೆಕ್ ವಿತರಿಸಲು ಅಧಿಕಾರಿಗಳು ಮುಂದಾದಾಗ ಪ್ರತಿಭಟನಾಕಾರರು ನಿರಾಕರಿಸಿದರು.
ಸಂಜೆ 6.30ರ ನಂತರ ನಡೆದ ದಿಢೀರ್ ಬೆಳವಣಿಗೆಯಲ್ಲಿ ಅಧಿಕಾರಿಗಳು ಪರಿಹಾರದ ಚೆಕ್ ವಿತರಿಸಿದರು. ಬಳಿಕ ಕುಟುಂಬಸ್ಥರು ಶವ ಪಡೆದು ಊರಿಗೆ ಮರಳಿದರು.
ಯುವಕ ಕೊಲೆಯಾಗಿ 3 ದಿನಗಳು ಕಳೆದ ಹಿನ್ನೆಲೆಯಲ್ಲಿ ಶವ ಕೊಳೆಯಲಾರಂಭಿಸಿ, ಸುತ್ತಮುತ್ತ ದುರ್ನಾತ ಹರಡಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಶವ ಕೆಡದಂತೆ ಇಡಲು ಯಾವುದೇ ವ್ಯವಸ್ಥೆ ಇಲ್ಲದ ಕಾರಣ, ಕಾರವಾರದ ಕ್ರಿಮ್ಸ್‌ಗೆ ಶವವನ್ನು ಸಾಗಿಸಿ, ಕೊಳೆಯದಂತೆ ಇಡುವ ಬಗೆಗೂ ಚರ್ಚೆ ನಡೆದಿತ್ತು.
ಅಧಿಕಾರಿಗಳು ಮೃತನ ಕುಟುಂಬದವರೊಂದಿಗೆ ನಡೆಸಿದ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿನಾಥ ಗಾಂವ್ಕರ ಹಾಗೂ ಕೆಲ ಮುಖಂಡರು ಉಪಸ್ಥಿತರಿದ್ದರು. ಸಭೆಯನ್ನು ಗುಟ್ಟಾಗಿ ನಡೆಸಲಾಗಿದ್ದು, ಅದರ ಹಿಂದಿನ ಉದ್ದೇಶವೇನು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಕೆಲವೇ ಜನರನ್ನು ಸೇರಿಸಿಕೊಂಡು ಪ್ರತಿಭಟನಾಕಾರರನ್ನು, ಮಾಧ್ಯಮದವರನ್ನೂ ಹೊರಗಿಟ್ಟು ಸುಮಾರು 2 ತಾಸು ನಡೆಸಿದ ಸಭೆಯ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ಇದನ್ನು ಪ್ರಶ್ನಿಸಲು ಹೋದ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಪ್ರತಿಭಟನೆಯ ವಿಷಯದಲ್ಲಿ ಗಟ್ಟಿಯಾಗಿದ್ದ ಸಿದ್ದಿ ಸಮುದಾಯದ ಮುಖಂಡರು ಸಂಜೆ ವೇಳೆಗೆ ಯೂಟರ್ನ್ ಹೊಡೆದದ್ದು ವಿಚಿತ್ರವಾಗಿತ್ತು.