

ಮಂಡ್ಯ: ಲೋಕ ಕಲ್ಯಾಣಾರ್ಥಕ್ಕಾಗಿ ಓಂ ವಿಶ್ವಮಹಾಗುರು ಭಗವಾನ್ ಕ್ಷೇತ್ರ ಚಾರಿಟಬಲ್ ಟ್ರಸ್ಟ್ ವತಿಯಿಂದ ಜೂ.9 ರಿಂದ 11ರವರೆಗೆ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಎದುರಿನ ಮೈದಾನದಲ್ಲಿ ಸುದರ್ಶನ ಮಹಾಯಾಗ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ ತಿಳಿಸಿದರು.
ಶ್ರೀರಂಗನಾಥಸ್ವಾಮಿ ನೆಲೆಗೊಂಡಿರುವುದರಿಂದ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಾಯಾಗದಲ್ಲಿ ಐದು ಜೀವನದಿಗಳ ಜಲಭರಿತ 108 ಕಳಶಗಳಿದ್ದು, 11 ಹೋಮ ಕುಂಡಲಗಳನ್ನು ಸ್ಥಾಪಿಸಿ ಸುಮಾರು 130 ಜನ ಪ್ರಸಿದ್ಧ ಪುರೋಹಿತರಿಂದ ಪ್ರತಿದಿನ ಬೇರೆ ಬೇರೆ ಪೂಜೆ, ಹೋಮಗಳು ನಡೆಯಲಿವೆ. ಅಂತೆಯೇ ಮೂರು ದಿನವೂ ಲಯನ್ಸ್ ಕ್ಲಬ್‌ನಿಂದ ರಕ್ತದಾನ ಶಿಬಿರ ಹಾಗೂ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
9ರಂದು ಬೆಳಗ್ಗೆ 8 ಗಂಟೆಗೆ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ಉದ್ಘಾಟನೆ ಮಾಡುವರು. ಶೃಂಗೇರಿ ಮಹಾಸಂಸ್ಥಾನ ಮಠದ ಭಾರತಿ ತೀರ್ಥ ಮಹಾಸ್ವಾಮೀಜಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಸಾನ್ನಿಧ್ಯ ವಹಿಸುವರು. 11ಗಂಟೆಗೆ ಬೇಬಿ ಮಠದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮತ್ತು ಕಾಗಿನೆಲೆ ಕನಕಗುರುಪೀಠದ ಶಿವಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡುವರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
10ರಂದು ಬೆಳಗ್ಗೆ 11 ಗಂಟೆಗೆ ಆಯೋಜಿಸಿರುವ ಸಮಾರಂಭದ ಸಾನಿಧ್ಯವನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೇಬಿ ಮಠದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ತೀರ್ಥಹಳ್ಳಿ ನಾರಾಯಣಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಮಳವಳ್ಳಿಯ ಸಪ್ಪೆಸ್ವಾಮಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಟಿ.ನರಸೀಪುರ ಪಾರಮಾರ್ಥಿಕ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬಸವ ಭೃಂಗೇಶ್ವರ ಮಹಾಮಠದ ಬಸವ ಭೃಂಗೇಶ್ವರ ಸ್ವಾಮೀಜಿ, ಕಾಶಿ ಅನ್ನಪೂರ್ಣೇಶ್ವರಿ ಮಠದ ಬಸವ ಮಹಾಲಿಂಗ ಸ್ವಾಮೀಜಿ, ವಿರಕ್ತಮಠದ ಚನ್ನಬಸವ ಸ್ವಾಮೀಜಿ ವಹಿಸಲಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಜಿ.ಟಿ. ದೇವೇಗೌಡ, ಹರೀಶ್‌ಗೌಡ ಹಲವರು ಪಾಲ್ಗೊಳ್ಳಿದ್ದಾರೆ ಎಂದು ವಿವರಿಸಿದರು.
11ರಂದು ಬೆಳಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭದ ಸಾನಿಧ್ಯವನ್ನು ವಿಶ್ವ ಒಕ್ಕಲಿಗರ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಬೇಬಿ ಮಠದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಹೊರನಾಡು ಶ್ರೀಕ್ಷೇತ್ರದ ಧರ್ಮದರ್ಶಿ ಡಾ.ಜಿ. ಭೀಮೇಶ್ವರಜೋಷಿ, ಓಂಕಾರಾ ಆಶ್ರಮದ ಆಚಾರ್ಯ ಮಹಾಮಂಡಲೇಶ್ವರ ಮಧುಸೂದನಪುರಿ ವಹಿಸಲಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸುವರು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಮಾರೋಪ ನುಡಿಯನ್ನಾಡುವರು. ಗೃಹ ಸಚಿವ ಡಾ. ಜಿ.ಪರಮೇಶ್ವರ್, ಸಚಿವರಾದ ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ಲಕ್ಷ್ಮೀ ಹೆಬ್ಬಾಳ್ಕರ್ ಭಾಗವಹಿಸುವರು ಎಂದರು.
ಟ್ರಸ್ಟ್‌ನ ಅಧ್ಯಕ್ಷ ಎ.ಶಂಕರ್, ಕಾರ್ಯದರ್ಶಿ ಎನ್.ಲಕ್ಷ್ಮೀ, ಟ್ರಸ್ಟಿ ಶಶಿಕುಮಾರ್ ಇದ್ದರು.