

ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸ್ಥಳೀಯ ಭಕ್ತರಿಗೆ ಸುಲಲಿತವಾಗಿ ಕೃಷ್ಣ ದರ್ಶನ ಮಾಡಲು ಪರ್ಯಾಯ ಅದಮಾರು ಮಠದಿಂದ ಸುದರ್ಶನ ಪಾಸ್ ವ್ಯವಸ್ಥೆ ಜಾರಿಗೆ ಬಂದಿದ್ದು, ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಭಾನುವಾರ ಸಾಂಕೇತಿಕ ವಾಗಿ ವಿತರಿಸಿದರು.
ಭಕ್ತರ ಸಂಖ್ಯೆ ಅಧಿಕವಿದ್ದು ಜನ ಸಂದಣಿ ಇರುವಾಗ, ಸ್ಥಳೀಯ ಭಕ್ತರಿಗೆ ದೇವರ ದರ್ಶನ ಮಾಡಲು ಅನುಕೂಲವಾಗುವಂತೆ ಪಾಸ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಕಾರ್ಡಿನಲ್ಲಿ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಇರುವುದರಿಂದ ವಿಶೇಷ ಸಂದರ್ಭಗಳಲ್ಲಿ ಮಠದಿಂದ ಸಂದೇಶ ಕಳುಹಿಸಲು ಸಾಧ್ಯವಾಗಲಿದೆ.
ಇದರಿಂದ ಕೃಷ್ಣ ಭಕ್ತರಿಗೆ ಅನುಕೂಲವಾಗಲಿದೆ ಎಂದು ಶ್ರೀಗಳು ತಿಳಿಸಿದರು.
ಮಧ್ಯಾಹ್ನ 2ರಿಂದ ಸಾಯಂಕಾಲ 5 ಗಂಟೆಯವರೆಗೆ ದೇವರ ದರ್ಶನ ಅವಕಾಶ ಕಲ್ಪಿಸಿದ್ದು, ಮಠದ ದಕ್ಷಿಣದಲ್ಲಿರುವ ಮಹಾದ್ವಾರದ ಸಮೀಪ ಹಾಗೂ ಉತ್ತರ ದ್ವಾರದ ಮೂಲಕ ಪಾಸ್ ಇರುವ ಭಕ್ತರು ಪ್ರವೇಶ ಮಾಡಬಹುದು ಎಂದು ಪರ್ಯಾಯ ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ.