ಶ್ರೀರಾಘವೇಂದ್ರ ಮಠದಲ್ಲಿ ಸುದರ್ಶನ ಹೋಮ

Published on

ಬಳ್ಳಾರಿ : ನಗರದ ಸತ್ಯನಾರಾಯಣ ಪೇಟೆಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಮಂತ್ರಾಲಯ ಮಠದ ಶ್ರೀಸುಬುಧೇಂದ್ರ ತೀರ್ಥರಿಂದ ಸುದರ್ಶನ ಹೋಮ ಹಾಗೂ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರ ಜರುಗಿದವು.

ಕಾರ್ಯಕ್ರಮದಲ್ಲಿ ಬೆಳಗ್ಗೆ ಸುಬುಧೇಂದ್ರ ತೀರ್ಥರಿಂದ ಭಕ್ತರಿಗೆ ತಪ್ತ ಮುದ್ರಧಾರಣೆ ನಡೆಯಿತು. ನಂತರ ಶ್ರೀಗಳು ಸಂಸ್ಥಾನ ಪೂಜೆ ನೆರವೇರಿಸಿದರು. ಶ್ರೀಗುರುರಾಯರಿಗೆ ವಿಶೇಷ ಪೂಜೆ, ಅಲಂಕಾರ, ಮಹಾಮಂಗಳಾರತಿ, ಮಹಾನೈವೇದ್ಯ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನೆರವೇರಿದವು.

ಬಳಿಕ ನಡೆದ ವಿಶೇಷ ಉಪನ್ಯಾಸದಲ್ಲಿ ಶ್ರೀಡಾ.ಸುಬುಧೇಂದ್ರ ತೀರ್ಥರು ಮಾತನಾಡಿ, ಪ್ರತಿಯೊಬ್ಬರೂ ನಿತ್ಯ ದೇವರ ಪೂಜೆ ಮಾಡಬೇಕು, ನಮ್ಮ ಧರ್ಮವನ್ನು ನಾವು ಕಾಪಾಡಲೇಬೇಕು. ನಮ್ಮ ಸಂಸ್ಕೃತಿ ಉಳಿಯಬೇಕು, ದೇವರು ನಮಗೇನು ಮಾಡಿಲ್ಲ ಎನ್ನುವ ಬದಲು ದೇವರಿಗೆ ನಾವೇನು ಮಾಡಿದ್ದೇವೆ ಎನ್ನುವುದು ಮುಖ್ಯ ಎಂಬಂತೆ, ಪ್ರತಿಯೊಬ್ಬರೂ ನಿತ್ಯ ದೇವರ ಪೂಜೆ ಮಾಡಬೇಕು, ಖಂಡಿತ ಎಲ್ಲರಿಗೂ ಒಳ್ಳೆಯದಾಗಲಿದೆ. ಮುದ್ರಧಾರಣೆಯಿಂದ ಸಕಲ ರೋಗಗಳು ದೂರವಾಗಲಿವೆ, ಎಲ್ಲರೂ ಮುದ್ರೆ ಹಾಕಿಸಿಕೊಳ್ಳಬಹುದು ಎಂದರು.

ನಮ್ಮ ಸಂಸ್ಕೃತಿ, ನಮ್ಮ ಪದ್ಧತಿಯನ್ನು ನಾವು ಪಾಲಿಸಬೇಕು, ನಾವು ನಮ್ಮ ಧರ್ಮವನ್ನು ಪಾಲಿಸಿದರೆ, ಧರ್ಮ ನಮ್ಮ ರಕ್ಷಿಸಲಿದೆ. ಶ್ರಾದ್ಧ ಕರ್ಮಾಧಿಗಳನ್ನು ಮಾಡಲು ಆರ್ಥಿಕವಾಗಿ ನಮ್ಮವರು ಸಮಸ್ಯೆ ಎದುರಿಸುತ್ತಿದ್ದರೆ, ಅಂತವರು ನಮ್ಮ ಮಠಕ್ಕೆ ಬಂದು ಉಚಿತವಾಗಿ ಮಾಡಿಕೊಳ್ಳುವ ವ್ಯವಸ್ಥೆಯಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಶ್ರೀರಾಘವೇಂದ್ರ ಸ್ವಾಮಿಗಳವರ ಮಠ ಭಕ್ತರ ಮಠವಾಗಿದೆ ಎಂದರು.

ಶ್ರೀಗಳ ಸಂಸ್ಥಾನ ಪೂಜೆ ವೀಕ್ಷಣೆಗೆ ಆಗಮಿಸಿದ ಸಾವಿರಾರು ಭಕ್ತರಿಗೆ ಅನುಕೂಲವಾಗುವಂತೆ ಎಲ್ಇಡಿ ಪರದೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ನೆರೆದ ಭಕ್ತರು ಪೂಜೆ, ಕಾರ್ಯಕ್ರಮ ವೀಕ್ಷಿಸಿ ಕಣ್ತುಂಬಿಕೊಂಡು ಭಕ್ತಿ ಸಮರ್ಪಿಸಿದರು. ನಂತರ ಎಲ್ಲ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಮುಖಂಡರು, ಗಣ್ಯರು, ಶ್ರೀಮಠದ ಸಿಬ್ಬಂದಿಗಳು, ನೂರಾರು ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net