

ಮಂಗಳೂರು : ಭಾರತ ಮಣ್ಣಿನಲ್ಲಿ ಸನಾತನ ಧರ್ಮದ ಅಂತಃಸತ್ವ ಅಡಕವಾಗಿದೆ. ಮೆಕಾಲೆ , ಕಾರ್ಲ್ ಮಾರ್ಕ್ಸ್ ಮಾನಸಿಕತೆಯಿಂದ ಹೊರ ಬಂದರೆ ಮಾತ್ರ ಸನಾತನ ಸಂಸ್ಕೃತಿಯನ್ನು ಶ್ರೇಷ್ಠತೆಯನ್ನು ಅರಿಯಲು ಸಾಧ್ಯ. ಸದ್ಯೋ ಭವಿಷ್ಯದಲ್ಲಿ ಭಾರತ ವಿಶ್ವದ ಉತ್ತುಂಗ ಸ್ಥಾನಕ್ಕೆ ಏರಲಿದ್ದು, ಭಾರತೀಯರ ಅಂತಃಸತ್ವವನ್ನು ಜಾಗೃತಗೊಳಿಸುವ ಪ್ರಜ್ಞೆಯ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ , ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ.ಸುಧಾಂಶು ತ್ರಿವೇದಿ ಹೇಳಿದರು.
ಸಿಟಿಜನ್ಸ್ ಕೌನ್ಸಿಲ್ ಮಂಗಳೂರು ಶಾಖೆ ವತಿಯಿಂದ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಅವರು ‘ಭಾರತ ಮತ್ತು ಸನಾತನ ’ ವಿಷಯದ ಕುರಿತು ಉಪನ್ಯಾಸ ನೀಡಿದರು.
ಸಹಸ್ರಮಾನದ ಇತಿಹಾಸ, ಭವ್ಯ ನಾಗರಿಕತೆ ಹೊಂದಿರುವ ಭಾರತ ಇಂದು ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಿದ್ದು ಆರ್ಥಿಕವಾಗಿಯೂ ಬಲಾಡ್ಯವಾಗಿದೆ. ಆದರೆ ಮೆಕಾಲೆ , ಮಾರ್ಕ್ಸ್ ವೈರಸ್ ಬಾಧಿತ ದುಷ್ಟ ಶಕ್ತಿಗಳು ಭಾರತದ ಏಳಿಗೆಯನ್ನು ಸಹಿಸುವುದಿಲ್ಲ. ಮುಂದಿನ ೨೫ ವರ್ಷದ ಅಮೃತಕಾಲದಲ್ಲಿ ಭಾರತವನ್ನು ವಿಶ್ವದ ನಂ.೧ ಆರ್ಥಿಕತೆಯ ದೇಶವನ್ನಾಗಿ ಮಾಡುವ ಗುರಿಯೊಂದಿಗೆ ಹಿಂದೂ ಸಂಸ್ಕೃತಿಯನ್ನು ಎತ್ತರಕ್ಕೇರಿಸುವ ಕಾರ್ಯ ಆಗಬೇಕು. ಮುಂದಿನ ಒಂದು ಸಾವಿರ ವರ್ಷಗಳ ದೂರದೃಷ್ಟಿಯೊಂದಿಗೆ ಈ ದೇಶವನ್ನು ಕಟ್ಟುವ ಕಾರ್ಯ ಅಮೃತಕಾಲದಲ್ಲಿ ಆಗಬೇಕಿದೆ ಎಂದು ಅವರು ಹೇಳಿದರು.
ಸನಾತನ ಧರ್ಮದಲ್ಲಿ ಇರುವಷ್ಟು ದೊಡ್ಡ ಮಟ್ಟದ ಪ್ರಜಾಪ್ರಭುತ್ವ ಜಗತ್ತಿನ ಬೇರಾವ ಧರ್ಮದಲ್ಲೂ ಇಲ್ಲ. ವೈಜ್ಞಾನಿಕವಾಗಿಯೂ ಸನಾತನ ಧರ್ಮ ತನ್ನ ಉತ್ಕೃಷ್ಟತೆಯನ್ನು ಸಾಬೀತುಪಡಿಸಿದೆ. ಹಿಂದೂ ಧರ್ಮದಲ್ಲಿ ಪ್ರಜಾಪ್ರಭುತ್ವ ಇರುವ ಕಾರಣ ದ್ವೈತ, ಅದ್ವೈತ ಮುಂತಾದ ಸಿದ್ಧಾಂತಗಳು ಹುಟ್ಟಿಕೊಂಡವು. ದಕ್ಷಿಣ ಭಾರತದಲ್ಲಿ ಆರಂಭವಾದ ಈ ಧರ್ಮ ವಿಜಯ ಇಡೀ ದೇಶ ವ್ಯಾಪಿಸುವುದರೊಂದಿಗೆ ಜಗತ್ತಿನಾದ್ಯಂತ ಹಿಂದೂ ಧರ್ಮ ವಿಸ್ತಾರವಾಗಲು ಸಾಧ್ಯವಾಯಿತು. ಇವೆಲ್ಲವೂ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಸಾರುವುದರೊಂದಿಗೆ ಧರ್ಮದೊಳಗಿನ ಪ್ರಜಾಪ್ರಭುತ್ವಕ್ಕೆ ಸಾಕ್ಷಿಯಾಗಿದೆ ಎಂದು ಡಾ.ಸುಧಾಂಶು ತ್ರಿವೇದಿ ಪ್ರತಿಪಾದಿಸಿದರು.
ಕಾರ್ಲ್ ಮಾರ್ಕ್ಸ್ ಎಂದೂ ಭಾರತಕ್ಕೆ ಆಗಮಿಸದೆ ಇದ್ದರೂ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ್ದಾನೆ. ಬ್ರಿಟಿಷರು ಭಾರತಕ್ಕೆ ಆಗಮಿಸುವುದಕ್ಕಿಂತ ಹಿಂದೆ ಇಲ್ಲಿನ ಶಿಕ್ಷಣ ಪದ್ಧತಿ ಉತ್ಕೃಷ್ಟವಾಗಿತ್ತು ಎನ್ನುವುದನ್ನು ಸ್ವತಃ ಮಹಾತ್ಮಾ ಗಾಂಧೀಜಿ ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಪರಿಷತ್‌ನಲ್ಲಿ ಪ್ರತಿಪಾದಿಸಿದ್ದಾರೆ. ಮೆಕಾಲೆ ಪದ್ಧತಿ ಬಿಟ್ಟು ನಮ್ಮ ಸಂಸ್ಕೃತಿಯ ಆಚಾರ ವಿಚಾರಗಳ ಶಿಕ್ಷಣ ಪದ್ಧತಿ ಬೇಕಾಗಿದೆ. ಸನಾತನ ಸಂಸ್ಕೃತಿ ಮೇಲೆ ಎಷ್ಟು ದಾಳಿ ನಡೆದರೂ ಎಲ್ಲವನ್ನು ಮೀರಿ ಭಾರತ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಔನ್ನತ್ಯಕ್ಕೇರಲಿದೆ ಎಂದು ಅವರು ಹೇಳಿದರು.
ಸಿಟಿಜನ್ಸ್ ಕೌನ್ಸಿಲ್ ಮಂಗಳೂರು ಶಾಖೆ ಅಧ್ಯಕ್ಷ ಡಾ.ಧನೇಶ್‌ಕುಮಾರ್ ಕೆ.ಯು. ಸ್ವಾಗತಿಸಿದರು.