ಪರೀಕ್ಷೆಗೆ ಅವಕಾಶ ಸಿಗದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ ; ಶುಲ್ಕ ಕಟ್ಟದ ಹಿನ್ನೆಲೆಯಲ್ಲಿ ನೋಂದಣಿ ಮಾಡದ ಸಂಸ್ಥೆ ; ಕೊರಟಗೆರೆಗೆ ಶಿಕ್ಷಣ ಸಚಿವ ಭೇಟಿ

17_krt_ph_01
Published on

ಕೊರಟಗೆರೆ : ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿಲ್ಲ ಎಂದು ಮನನೊಂದ ವಿದ್ಯಾರ್ಥಿನಿ ಶನಿವಾರ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಿಷಯ ತಿಳಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಕ್ಷಣವೇ ಕೊರಟಗೆರೆ ಪಟ್ಟಣದ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಲ್ಲದೆ ಆಗಸ್ಟ್‌ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದ್ದಾರೆ.

ಪಟ್ಟಣದ ಕನಕದಾಸ ವೃತ್ತದ ಬಳಿಯಿರುವ ನರಸಿಂಹಮೂರ್ತಿ ಮತ್ತು ಪದ್ಮಾವತಿ ಪುತ್ರಿ ಗ್ರೀಷ್ಮಾ ನಾಯಕ್ ಎನ್.ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಸತಿ ಶಾಲೆಯಲ್ಲಿ ಓದುತ್ತಿದ್ದಳು. 9ನೇ ತರಗತಿಯಲ್ಲಿ ಶೇ.96 ಅಂಕ ಪಡೆದಿರುವ ಈಕೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದಳು. ನಂತರ ಶಾಲಾ ಆಡಳಿತ ಮಂಡಳಿ 9ನೇ ತರಗತಿಯ ಶುಲ್ಕ ಬಾಕಿ ಇದ್ದ ಹಿನ್ನೆಲೆಯಲ್ಲಿ 10ನೇ ತರಗತಿಗೆ ಪ್ರವೇಶ ಕಲ್ಪಿಸಿಲ್ಲ. ಪಾಲಕರು ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಂದಣಿ ಬಗ್ಗೆ ಸಂಸ್ಥೆಯಲ್ಲಿ ವಿಚಾರಿಸಿದಾಗ ಶುಲ್ಕ ಕಟ್ಟದ ಕಾರಣ ಪರೀಕ್ಷೆಗೆ ನೋಂದಣಿಯಾಗದ ಬಗ್ಗೆ ತಿಳಿದುಬಂದಿದೆ. ಇದರಿಂದ ನೊಂದ ವಿದ್ಯಾರ್ಥಿನಿ ಮಕ್ಕಳ ಹಕ್ಕುಗಳ ಆಯೋಗದ ಮೊರೆ ಹೋಗಿ, ಡಿಡಿಪಿಐ, ಶಿಕ್ಷಣ ಸಚಿವರಿಗೆ ಇ-ಮೇಲ್ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಿಷಯ ತಿಳಿದ ಕೂಡಲೇ ಸಚಿವರು ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ರಾಜ್ಯದಲ್ಲಿ ಪರೀಕ್ಷೆಗೆ ಅವಕಾಶ ಸಿಗದ 18 ಸಾವಿರ ವಿದ್ಯಾರ್ಥಿಗಳಿದ್ದು, ಎಲ್ಲರಿಗೂ ಆಗಸ್ಟ್‌ನಲ್ಲಿ ಪೂರಕ ಪರೀಕ್ಷೆ ನಡೆಸಲಾಗುತ್ತದೆ. ಇವರನ್ನು ಮೊದಲ ಪ್ರಯತ್ನದ ವಿದ್ಯಾರ್ಥಿಗಳು ಎಂದೇ ಪರಿಗಣಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದಾಗಿ ತಿಳಿಸಿದ ಸಚಿವರು, ವಿದ್ಯಾರ್ಥಿನಿ ಪಾಲಕರಿಗೆ ಆತಂಕಪಡುವ ಅವಶ್ಯಕತೆಯಿಲ್ಲ. ನಿಮ್ಮ ಮಗಳನ್ನು ಪಿಯುಸಿಗೆ ಕಳುಹಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ್ದಾರೆ.

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ರೇವಣ್ಣ ಸಿದ್ದಪ್ಪ, ಬಿಇಒ ಸುಧಾಕರ್, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಆರ್ ರು, ಬಿ.ಆರ್.ಸಿ ಸುರೇಂದ್ರನಾಥ್, ಬಿಜೆಪಿ ತಾಲೂಕು ಅಧ್ಯಕ್ಷ ಎಸ್. ಪವನ್ ಕುವಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋಡ್ಲಹಳ್ಳಿ ಆಶ್ವತ್ಥನಾರಾಯಣ, ಅರಕೆರೆ ಶಂಕರ್ ಇದ್ದರು.

ಶಾಸಕ ಪರಮೇಶ್ವರ್ ವಿಷಾದ: ಸುರೇಶ್ ಕುಮಾರ್ ಭೇಟಿ ನಂತರ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿದ್ದ ಡಾ.ಜಿ.ಪರಮೇಶ್ವರ್, ವಿದ್ಯಾರ್ಥಿನಿಗೆ ಆಗಿರುವ ತೊಂದರೆಗೆ ವಿಷಾದ ವ್ಯಕ್ತಪಡಿಸಿದರು. ಈ ವಿಚಾರ ನನಗೆ ಮೊದಲೇ ತಿಳಿಸಿದ್ದರೆ ಖುದ್ದಾಗಿ ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವಾ ಅವರಿಗೇ ತಿಳಿಸಿ ಪ್ರಕರಣಕ್ಕೆ ಇತಿಶ್ರೀ ಆಡಬಹುದಿತ್ತು. ಆಗಸ್ಟ್‌ನಲ್ಲಿ ನಡೆಯುವ ಪರೀಕ್ಷೆಗೆ ವಿದ್ಯಾರ್ಥಿನಿಗೆ ಅವಕಾಶ ನೀಡಲು ಡಿಡಿಪಿಐಗೆ ಸೂಚಿಸಿದರು.

ಮಾಹಿತಿಯ ಕೊರತೆ, ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯ ಸೇರಿ ವಿವಿಧ ಕಾರಣಗಳಿಂದ ರಾಜ್ಯದಲ್ಲಿ 18 ಸಾವಿರ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿಲ್ಲ. ಇಂತಹ ವಿದ್ಯಾರ್ಥಿಗಳಿಗಾಗಿಯೇ ಆಗಸ್ಟ್‌ನಲ್ಲಿ ಪೂರಕ ಪರೀಕ್ಷೆ ನಡೆಸುತ್ತಿದ್ದು, ವಿದ್ಯಾರ್ಥಿಗಳು ಈ ಅವಕಾಶ ಬಳಸಿಕೊಂಡು ಪರೀಕ್ಷೆಗೆ ನೋಂದಣಿ ಮಾಡಿಸಬೇಕು. ಸುರೇಶ್ ಕುಮಾರ್, ಶಿಕ್ಷಣ ಸಚಿವ 9 ನೇ ತರಗತಿಯ 25 ಸಾವಿರ ರೂಪಾಯಿ ಶುಲ್ಕ ಸಂದಾಯ ಮಾಡಿದರಷ್ಟೇ 10ನೇ ತರಗತಿ ದಾಖಲಾತಿ ಮಾಡುವುದಾಗಿ ಶಾಲೆಯವರು ಹೇಳಿದ್ದರು. ಲಾಕ್‌ಡೌನ್ ಹಿನ್ನೆಯಲ್ಲಿ ಶುಲ್ಕಕಟ್ಟದ ಕಾರಣ ಮಗಳ ದಾಖಲಾತಿಯನ್ನೇ ಮಾಡಿಕೊಂಡಿಲ್ಲ. ಹೀಗಾಗಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಆತಂಕಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ನರಸಿಂಹಮೂರ್ತಿ, ವಿದ್ಯಾರ್ಥಿನಿ ತಂದೆ ನಾನು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಸಂಬಂಧಪಟ್ಟ ಎಲ್ಲರಿಗೂ ಮನವಿ ಪತ್ರ ಸಲ್ಲಿಸಿದ್ದೆ. ಯಾರೊಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದೆ. ಇದು ತಪ್ಪು ಯಾರೊಬ್ಬರೂ ಈ ರೀತಿ ವಾಡಿಕೊಳ್ಳಬಾರದು. ಈಗ ಶಿಕ್ಷಣ ಸಚಿವರೇ ಬಂದು ನನ್ನ ಮುಂದಿನ ಪರೀಕ್ಷೆಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಗ್ರೀಷ್ಮಾ ನಾಯಕ್ ಎನ್. ವಿದ್ಯಾರ್ಥಿನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net