ಪತ್ನಿಗಾಗಿ ಬಸ್ ಚಕ್ರಕ್ಕೆ ತಲೆಕೊಟ್ಟ ಪತಿ!

sucide drama
Published on

ಹೊಸಕೋಟೆಯಲ್ಲಿ ಹೈಡ್ರಾಮಾ

ಉಚಿತ ಬಸ್ ಸೇವೆ ಕ್ಯಾನ್ಸಲ್ ಮಾಡುವಂತೆ ಮದ್ಯವ್ಯಸನಿ ರಂಪಾಟ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರವಾಸಕ್ಕೆಂದು 4 ದಿನದ ಹಿಂದೆ ತೆರಳಿದ್ದ ಪತ್ನಿ ಮನೆಗೆ ಮರಳಿಲ್ಲ ಎಂದು ಸಿಟ್ಟಿಗೆದ್ದ ಪತಿಯೊಬ್ಬ ಹೊಸಕೋಟೆಯಲ್ಲಿ ಬಿಎಂಟಿಸಿ ಬಸ್ ಚಕ್ರದಡಿ ತಲೆಯಿಟ್ಟು ಮಲಗಿ ಹೈಡ್ರಾಮಾ ಸೃಷ್ಟಿಸಿದ ಪ್ರಸಂಗ ಗುರುವಾರ ನಡೆದಿದೆ.
ಹೊಸಕೋಟೆ ಬಸ್ ನಿಲ್ದಾಣಕ್ಕೆ ಬಂದ ವ್ಯಕ್ತಿಯೊಬ್ಬ ನಿಂತಿದ್ದ ಬಸ್‌ನ ಚಕ್ರಕ್ಕೆ ತಲೆಕೊಟ್ಟು ಮಲಗಿದ್ದಾನೆ. ಸರ್ಕಾರ ಉಚಿತ ಬಸ್ ಸೇವೆ ನೀಡಿದ ಹಿನ್ನೆಲೆಯಲ್ಲಿ ನನ್ನ ಪತ್ನಿ ಪ್ರವಾಸಕ್ಕೆ ತೆರಳಿದ್ದಾಳೆ. ನಾಲ್ಕೈದು ದಿನವಾದರೂ ಬಂದಿಲ್ಲ. ನನ್ನ ಕುಟುಂಬದ ಕಥೆ ಏನು ಎಂದು ವರಾತ ಆರಂಭಿಸಿದ ಪತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೂಡಲೇ ಉಚಿತ ಬಸ್ ಸೇವೆ ರದ್ದುಗೊಳಿಸಬೇಕು, ಇಲ್ಲವಾದರೆ ಇದೇ ಚಕ್ರಕ್ಕೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಬಗ್ಗದ ಪತಿರಾಯ: ಬಸ್ ಚಕ್ರದಿಂದ ಹೊರಬರುವಂತೆ ಸಾರಿಗೆ ಸಿಬ್ಬಂದಿ ಹಾಗೂ ಸ್ಥಳೀಯರು ಎಷ್ಟೇ ಪ್ರಯತ್ನಿಸಿದರೂ ಯಾರ ಮಾತಿಗೂ ಬಗ್ಗದ ಈತ ಶಕ್ತಿ ಯೋಜನೆ ರದ್ದುಗೊಳಿಸುವ ಭರವಸೆ ನೀಡದ ಹೊರತು ಹೊರಗೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಹೊರಗೆ ಬನ್ನಿ ಎಂದು ಸಾರಿಗೆ ಸಿಬ್ಬಂದಿ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆಗ ಇದ್ದಕ್ಕಿದ್ದಂತೆ ವರಸೆ ಬದಲಿಸಿ ಹೆಂಗಸರಿಗಷ್ಟೇ ಏಕೆ, ಪುರುಷರಿಗೂ ಬಸ್ ಸೇವೆ ಉಚಿತ ಮಾಡಬೇಕು ಎಂದು ಕೂಗಾಡಿದ್ದಾನೆ.

ಪೊಲೀಸರು ಹೊರಗೆಳೆದು ಕಳುಹಿಸಿದರು: ಇದರಿಂದ ರೋಸಿಹೋದ ಸಾರಿಗೆ ಸಿಬ್ಬಂದಿ ಕಡೆಗೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಹೊಸಕೋಟೆ ಪೊಲೀಸರು ಹೊರಗೆ ಎಳೆದು ಮನೆಗೆ ಹೋಗುವಂತೆ ಬೆದರಿಸಿ ಕಳುಹಿಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಮದ್ಯವ್ಯಸನಿಯ ಪ್ರಹಸನ ಸ್ಥಳೀಯರಿಗೆ ಪುಕ್ಕಟ್ಟೆ ಮನರಂಜನೆ ಒದಗಿಸಿದರೆ ಈ ಭಾಗದಲ್ಲಿ ವಾಹನದಟ್ಟಣೆ ಏರ್ಪಟ್ಟು ವಾಹನ ಸವಾರರು ಪರದಾಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net