

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಪತಿ ಹಾಗೂ ಅವರ ಕುಟುಂಬದವರ ಕಿರುಕುಳ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು 8 ನಿಮಿಷದ ವಿಡಿಯೋ ಮಾಡಿ ಉಪನ್ಯಾಸಕಿ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಸೋಮವಾರ ತೂಬಗೆರೆಯಲ್ಲಿ ಪತ್ತೆಯಾಗಿದೆ.
ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋತೆನಹಳ್ಳಿ ಗ್ರಾಮದ ಪುಷ್ಪಾ(28) ಮೃತೆ. ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಮೃತೆಯ ಪತಿ ವೇಣು ಹಾಗೂ ಮಾವ ಗೋವಿಂದಪ್ಪ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಅತ್ತೆ ಭಾರತಿ, ಮೈದುನ ನಾರಾಯಣಸ್ವಾಮಿ ತಲೆಮರೆಸಿಕೊಂಡಿದ್ದು ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಪಿಕ್‌ಅಪ್ ಡ್ಯಾಂನಲ್ಲಿ ತೇಲುತ್ತಿದ್ದ ಶವ: ತೂಬಗೆರೆಯಲ್ಲಿನ ವಿಶ್ವೇಶ್ವರಯ್ಯ ಪಿಕ್‌ಅಪ್ ಡ್ಯಾಂನಲ್ಲಿ ಮಹಿಳೆಯ ಶವ ತೇಲುತ್ತಿದ್ದ ದೃಶ್ಯ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಸಹಕಾರದಲ್ಲಿ ಪೊಲೀಸರು ನೀರಿನಿಂದ ಶವ ಹೊರತೆಗೆದು ಶವಪರೀಕ್ಷೆಗೆ ರವಾನಿಸಿದ್ದರು. ಸ್ಥಳದಲ್ಲಿ ಪುಷ್ಪ ಅವರ ಪರ್ಸ್ ಹಾಗೂ ಡೆತ್‌ನೋಟ್ ಪತ್ತೆಯಾಗಿದೆ ಎನ್ನಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವರ್ಷದ ಹಿಂದೆ ಮದುವೆಯಾಗಿತ್ತು: ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ತಪಸೀಹಳ್ಳಿ ಗ್ರಾಮದ ವೇಣು ಎಂಬುವರ ಜತೆ ವರ್ಷದ ಹಿಂದೆ ಪುಷ್ಪಾ ಸಪ್ತಪದಿ ತುಳಿದಿದ್ದರು. ಮದುವೆಯಾದ ಹೊಸದರಿಂದಲೇ ಪತಿ ಹಾಗೂ ಪತಿ ಮನೆಯವರೊಂದಿಗೆ ವೈಮಸ್ಸು ಏರ್ಪಟ್ಟಿತ್ತು ಎನ್ನಲಾಗಿದೆ. ಪತಿ, ಅತ್ತೆ-ಮಾವ ಹಾಗೂ ಮೈದುನ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ನಿವೇಶವೊಂದಕ್ಕೆ ಬೇಡಿಕೆ ಇಟ್ಟು ಹಿಂಸೆ ನೀಡುತ್ತಿದ್ದರು ಎಂದು ಪುಷ್ಪಾ ಸಂಬಂಧಿಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗಂಡನ ಮನೆಯಲ್ಲಿ ಮಣ್ಣು ಮಾಡಿ: ಪತಿ ಹಾಗೂ ಆತನ ಕುಟುಂಬದವರು ಸಾಕಷ್ಟು ಕಿರುಕುಳ ನೀಡಿದ್ದಾರೆ, ಸಾಯುವಂತೆ ಒತ್ತಾಯಿಸುತ್ತಿದ್ದರು. ನನ್ನ ಸಾವಿನ ನಂತರ ನನ್ನ ಶವವನ್ನು ಗಂಡನ ಮನೆಯಲ್ಲಿಯೇ ಮಣ್ಣು ಮಾಡಬೇಕು ನನಗೆ ಆದ ಅನ್ಯಾಯ ಇನ್ಯಾವ ಹುಡುಗಿಯೂ ಆಗಬಾರದು, ನನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪುಷ್ಪಾ ಅಂಗಲಾಚಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಪೊಲೀಸರು ತನಿಖೆಗೆ ಬಳಸಿಕೊಂಡಿದ್ದಾರೆ. ನನಗೆ ಊಟದಲ್ಲಿ ವಿಷ ಹಾಕಿ ಕೊಲ್ಲುವ ಪ್ರಯತ್ನ ಮಾಡಿದ್ದರು. ಆದ್ದರಿಂದ ಮನೆಯಲ್ಲಿ ಊಟ ಮಾಡುವುದನ್ನೇ ಬಿಟ್ಟಿದ್ದೆ. ನನ್ನ ಪತಿಗೆ ಇನ್ನೊಂದು ಮದುವೆ ಮಾಡುವ ಪ್ಲಾನ್ ಮಾಡಿದ್ದರು. ಸೈಟ್ ಕೊಡಿಸುವಂತೆ ನನ್ನ ತವರು ಮನೆಯವರಿಗೆ ಕೇಳುವಂತೆ ಕಿರುಕುಳ ನೀಡುತ್ತಿದ್ದರು. ನನಗೆ ಕೆಲಸ ಮಾಡಲು ಬಿಡುತ್ತಿರಲಿಲ್ಲ. ದಿನಕ್ಕೆ ಅತ್ತೆ, ಪತಿ ಹಲವು ಬಾರಿ ಕರೆ ಮಾಡಿ ತೊಂದರೆ ಕೊಡುತ್ತಿದ್ದರು ಅದೆಲ್ಲ ನನ್ನ ಕಾಲ್ ರೆಕಾರ್ಡ್‌ನಲ್ಲಿದೆ. ಆದರೆ ಅವರು ನನ್ನ ಮೊಬೈಲ್ ಪ್ಲಾಷ್ ಮಾಡಿಸಿ ಸಾಕ್ಷ್ಯ ನಾಶ ಮಾಡಿದ್ದಾರೆ, ಪ್ರತಿ ನಿತ್ಯ ನರಕ ಅನುಭವಿಸಿದ್ದೇನೆ. ನನ್ನ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ವಿಡಿಯೋದಲ್ಲಿ ಗೋಗರೆದಿರುವ ಪುಷ್ಪಾ ಆ ವಿಡಿಯೋವನ್ನು ಸಂಬಂಧಿಕರಿಗೆ ಶೇರ್ ಮಾಡಿದ ನಂತರ ಪಿಕ್‌ಅಪ್ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪುಷ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ವೇಣು ಹಾಗೂ ಮಾವ ನಾರಾಯಣಪ್ಪ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳನ್ನು ವಶಕ್ಕೆ ಪಡೆಯಲು ಹುಡುಕಾಟ ನಡೆಸಲಾಗಿದೆ. ಪುಷ್ಪಾ ಆತ್ಮಹತ್ಯೆಗೆ ಶರಣಾದ ಜಾಗದಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು ಅದನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ.
ಡಾ.ನವೀನ್‌ಕುಮಾರ್, ಇನ್‌ಸ್ೆಕ್ಟರ್ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ