

ಗದಗ: ಆತ್ಮಹತ್ಯೆ ಒಂದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಆತ್ಮಹತ್ಯೆ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಗುರುಪ್ರಸಾದ ಅವರು ತಿಳಿಸಿದರು.
ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಾಕ್ರಮ ವೈದ್ಯಕೀಯ ಮಹಾವಿದ್ಯಾಲಯ-ಮನೋವೈದ್ಯಕೀಯ ವಿಭಾಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‍ವಿಶ್ವವಿದ್ಯಾಲಯ-ಮನೋಚೇತನ ಆಪ್ತ ಸಮಾಲೋಚನೆ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರದಂದು ನಾಗಾವಿಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಕೌಶಲ್ಯ ವಿಕಾಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನೂನಿನ ಪ್ರಕಾರ ಆತ್ಮಹತ್ಯೆ ಪ್ರಯತ್ನವು ಅಪರಾಧವಾಗಿದೆ ಆದರೆ 2017ರ ಮಾನಸಿಕ ಆರೋಗ್ಯ ಆರೈಕೆ ಕಾಯ್ದೆಯಡಿ ಆತ್ಮಹತ್ಯೆಯ ಪ್ರಯತ್ನಕ್ಕೆ ಮೂಲ ಕಾರಣ ತೀವ್ರತರವಾದ ಒತ್ತಡ ಮತ್ತು ಖಿನ್ನತೆಯಾಗಿದೆ. ಅದನ್ನು ಅಪರಾಧವೆಂದು ಪರಿಗಣಿಸದೆ ಆತ್ಮಹತ್ಯೆ ಪ್ರಯತ್ನಕ್ಕೆ ಒಳಪಟ್ಟ ವ್ಯಕ್ತಿಗೆ ಚಿಕಿತ್ಸೆ ನೀಡಿ ಪುನರ್ವಸತಿ ಮಾಡಬೇಕು. ಕಾನೂನಿನಲ್ಲಿರುವ ಇತರೆ ಕಾಯ್ದೆ ಹಾಗೂ ತಿದ್ದುಪಡಿಗಳ ಕುರಿತು ಮಾತನಾಡಿ “ಈಸಬೇಕು ಇದ್ದು ಜಯಿಸಬೇಕು” ಎಂದು ಕರೆ ನೀಡಿ ವಿದ್ಯಾರ್ಥಿಗಳು ಆತ್ಮಹತ್ಯೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೆಕೆಂದು ತಿಳಿಸಿದರು.
ಜಿಮ್ಸ್‍ದ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಸೋಮಶೇಶರ ಬಿಜ್ಜಳ ಅವರು ಮಾತನಾಡಿ ಹುಟ್ಟು ಆಕಸ್ಮಿಕ ಸಾವು ಖಚಿತ. ಪ್ರತಿ 40 ಸೆಕೆಂಡಿಗೆ ಒಬ್ಬ ವ್ಯಕ್ತಿಯು ಆತ್ಮಹತ್ಯೆಯಿಂದ ಮರಣಹೊಂದುತ್ತಿದ್ದಾರೆ. ಪ್ರತಿ 40 ಸೆಕೆಂಡಿಗೆ ಸೂಮಾರು 8 ಜನ ಆತ್ಮ ಹತ್ಯೆ ಪ್ರಯತ್ನ ಮಾಡುತ್ತಾರೆ ಎಂದು ತಿಳಿಸಿದರು. ಭಾರತದಲ್ಲಿ ಒಂದು ವರ್ಷದಲ್ಲಿ 1,63,000 ಜನ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ಸುಮಾರು 10 ಲಕ್ಷಜನ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆಂದು ವರದಿಯಾಗಿದೆ. ಆತ್ಮಹತ್ಯೆಗೆ ಕಾರಣಗಳು ಹಾಗೂ ಆತ್ಮಹತ್ಯೆಯನ್ನು ತಡೆಗಟ್ಟಬಹುದಾದ ಪರಿಹಾರಗಳ ಕುರಿತು ಮಾತನಾಡಿ ಆತ್ಮಹತ್ಯೆಯನ್ನು ತಡೆಯಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು
ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ವಿಷ್ಣುಕಾಂತ್ ಎಸ್. ಚಟಪಲ್ಲಿ ಮಾತನಾಡಿ ಆತ್ಮಹತ್ಯೆಯಿಂದ ಒಂದು ಮನೆ, ಸಮಾಜ, ರಾಜ್ಯ ಹಾಗೂ ರಾಷ್ಟ್ರಕ್ಕೆ ಸಾಕಷ್ಟು ಹಾನಿ ಉಂಟಾಗುತ್ತದೆ. ಇದು ಒಂದು ಸಾಮಾಜಿಕ ಪಿಡುಗಾಗಿದ್ದು ವಿದ್ಯಾರ್ಥಿಗಳು ಸಾಮಾಜಿಕ ಕೌಶಲ್ಯಗಳನ್ನು ಬೆಳೆಸಿಕೊಂಡು ಆತ್ಮಹತ್ಯೆ ತಡೆಯುವಲ್ಲಿ ಎಲ್ಲರೂ ಶ್ರಮಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಎಮ್.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು ಮೂಕ ಪಾತ್ರಾಭಿನಯ ಮಾಡಿ ಆತ್ಮಹತ್ಯೆ ತಡೆ ಕುರಿತು ಅರಿವು ಮೂಡಿಸಿದರು. ಡಾ. ರಾಘವೇಂದ್ರ ಪಾಟೀಲ್ ಅವರು ಮಾತನಾಡಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯ ಉದ್ದೇಶ ಹಾಗೂ ಮಹತ್ವ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಬಸವರಾಜ ಲಕ್ಕಣ್ಣವರ, ಸಮಾಜ ಕಾರ್ಯವಿಭಾಗ ಮತ್ತು ಸಾರ್ವಜನಿಕ ಆರೋಗ್ಯ ವಿಭಾಗದ ವಿದ್ಯಾರ್ಥಿಗಳು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ ಶ್ರೀಧರ ಎಮ್ ಸಿ. ವಿನಾಯಕ ಕಾಳೆ, ವಿನಾಯಕ ವಾಗಮೋರೆ, ಕು.ಶೋಭಾ ವಡ್ಡರ, ಕು.ನೂತನ ಹೊಸಮನಿ ಹಾಗೂ ಶಿರಸ್ತೆದಾರರಾದ ಬಿ.ಎಮ್.ಕುಕನೂರ, ಇವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಕು.ಕಾವ್ಯಾ ಪ್ರಾರ್ಥಿಸಿದರು. ಮಹೇಶ ಅಣ್ಣಿಗೇರಿ ಸ್ವಾಗತಿಸಿದರು. ಶ್ರೀಮತಿ ನಾಗರತ್ನಾ ನಾಯ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.