

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಮಾ. 6ರಂದು ಸಂಘಟಿಸಿರುವ ಬೃಹತ್ ಬೆಂಗಳೂರು ಚಲೋ ಹೋರಾಟದಲ್ಲಿ ಧಾರವಾಡ ವಿಭಾಗದಿಂದ ಸುಮಾರು 500 ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಜನ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಪಕ್ಷದ ಪಾಲಿಟ್ ಬ್ಯುರೋ ಸದಸ್ಯ ಕೆ. ರಾಧಾಕೃಷ್ಣ ಮತ್ತು ರಾಜ್ಯ ಕಾರ್ಯದರ್ಶಿ ಕೆ.ಉಮಾ ಮಾತನಾಡುವರು ಎಂದರು.
ಬೆಲೆ ಏರಿಕೆಯನ್ನು ತಡೆಗಟ್ಟಬೇಕು, ಜನವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಕ್ಷಣವೇ ಹಿಂಪಡೆಯಬೇಕು. ರಾಜ್ಯ ಮಟ್ಟದಲ್ಲಿ ನೈಜ ಜನಪರ ಶಿಕ್ಷಣ ನೀತಿಯನ್ನು ರೂಪಿಸಬೇಕು. ಸರ್ಕಾರಿ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಎಲ್ಲರಿಗೂ ಕಾಯಂ ಉದ್ಯೋಗ ಒದಗಿಸಬೇಕು. ಉದ್ಯೋಗ ನೀಡುವ ತನಕ ನಿರುದ್ಯೋಗ ಭತ್ಯೆಯನ್ನು ನೀಡಬೇಕು ಎಂಬಿತ್ಯಾದಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ದೇಶದ ಜನತೆ ಹೈರಾಣಾಗಿದ್ದಾರೆ. ಉದ್ಯೋಗ ನಾಶ, ನಿರುದ್ಯೋಗ, ಬೆಲೆ ಏರಿಕೆ ಜನರನ್ನು ಸಾಲಗಾರರನ್ನಾಗಿ ಮಾಡುತ್ತಿವೆ. ರೈತರು, ಕಾರ್ವಿುಕರು ಕಂಗಾಲಾಗಿದ್ದಾರೆ. ಶಿಕ್ಷಣ, ಆರೋಗ್ಯ ವ್ಯಾಪಾರೀಕರಣಗೊಂಡು ಬಡವರಿಗೆ ಕೈಗೆಟಕದಂತಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅವಶ್ಯಕ ರೋಗ ಪರೀಕ್ಷಾ ಸೌಲಭ್ಯ, ತಜ್ಞ ವೈದ್ಯರು, ಸಿಬ್ಬಂದಿ ಇಲ್ಲದೆ ಅಸಹಾಯಕರಾಗಿ ಖಾಸಗಿ ಆಸ್ಪತ್ರೆಗಳಿಗೆ ಹಣ ಸುರಿಯುವಂತಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗನ್ನವರ, ಸದಸ್ಯರಾದ ಗಂಗಾಧರ ಬಡಿಗೇರ, ಶರಣು ಗೋನವಾರ, ಭವಾನಿಶಂಕರ್ ಎಸ್. ಗೌಡ ಇದ್ದರು.