

ವಿರಾಜಪೇಟೆ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಜ್ಞಾನಗಂಗಾ ಭವನ ವಿರಾಜಪೇಟೆ ಸೇವಾ ಕೇಂದ್ರದ ವತಿಯಿಂದ ಭಾನುವಾರದಿಂದ ಆರಂಭವಾಗಿದ್ದ 3 ದಿನಗಳ ಮಕ್ಕಳ ಬೇಸಿಗೆ ಶಿಬಿರವು ಯಶಸ್ವಿಯಾಗಿ ನಡೆದು ಮಕ್ಕಳಲ್ಲಿ ಬಹಳ ಉತ್ಸಾಹ-ಉಲ್ಲಾಸವನ್ನು ತಂದಿತು.
ಕೇಂದ್ರದ ಮುಖ್ಯ ಸಂಚಾಲಕಿ ಬಿ.ಕೆ.ಕೋಮಲಾ ಅವರು ಶಿಬಿರದಲ್ಲಿ ಮಕ್ಕಳಿಗೆ ಸದಾ ಮನಸ್ಸನ್ನು ಸ್ವಚ್ಛವಾಗಿ, ಶಕ್ತಿಶಾಲಿಯಾಗಿ ಇಟ್ಟುಕೊಳ್ಳಬೇಕು ಎಂದರೆ ನಕಾರಾತ್ಮಕ ವ್ಯರ್ಥ ಯೋಚನೆಗಳಿಂದ ಮುಕ್ತರಾಗಿ ಸದಾ ಸಕಾರಾತ್ಮಕ ಚಿಂತನೆಗಳನ್ನು ಒಳ್ಳೆಯ ಹಾಗೂ ಶ್ರೇಷ್ಠ ಚಿಂತನೆಗಳನ್ನು ಮಾಡಬೇಕು ಎಂದು ಉದಾಹರಣೆಯ ಮೂಲಕ ತಿಳಿಸಿಕೊಟ್ಟರು.
ಎರಡನೇ ದಿನ ತ್ರಿವೇಣಿ ಶಾಲೆಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಬಿ.ಇ.ಪ್ರತಿಮಾ ಅವರು ಮಕ್ಕಳು ಬೆಳಗ್ಗೆ ಎದ್ದಾಗಿನಿಂದ ರಾತ್ರಿಯವರೆಗೆ ದಿನಚರಿ ಹೇಗಿರಬೇಕು ಎಂದು ತಿಳಿಸಿದರು.
ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಆಪ್ತ ಸಮಾಲೋಚಕಿ ಮುತ್ತಮ್ಮ ಆಧ್ಯಾತ್ಮಿಕತೆಯ ಮೂಲಕ ಸಮಾಲೋಚನೆ’ ಎನ್ನುವ ವಿಷಯ ಕುರಿತು ವಿಷಯ ಮಂಡಿಸಿದರು. ಜತೆಗೆ ಕರಕುಶಲತೆಯಲ್ಲಿ ಸುಂದರ ವೃಕ್ಷ ಮಾಡುವುದನ್ನು ಮಕ್ಕಳಿಗೆ ಹೇಳಿಕೊಟ್ಟರು.
ಬ್ರಹ್ಮಾಕುಮಾರಿ ಶಿವಾನಿ ಮತ್ತು ಅದ್ವಿತೀಯ-ಸಾಯಿಶಂಕರ್ ಶಾಲೆ, ಪೊನ್ನಂಪೇಟೆಯ ವಿದ್ಯಾರ್ಥಿನಿಯರು ನಿತ್ಯ ವ್ಯಾಯಾಮ, ಆಟೋಟ, ಹಾಡು, ನೃತ್ಯ ಮಾಡಿರುವುದರ ಮೂಲಕ ಮಕ್ಕಳನ್ನು ರಂಜಿಸಿದರು.
ಪ್ರತಿನಿತ್ಯ ಸೇವಾ ಕೇಂದ್ರದಲ್ಲಿ ಮಧ್ಯಾಹ್ನ ಭೋಜನ, ಪಾನೀಯ, ಸಂಜೆಗೆ ತಿಂಡಿ ನೀಡಲಾಯಿತು. ಕೊನೆಯಲ್ಲಿ ಪರೀಕ್ಷೆ ಮತ್ತು ಆಟಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿ, ಪ್ರತಿಯೊಬ್ಬರಿಗೂ ಈಶ್ವರೀಯ ಉಡುಗೊರೆ ನೀಡಿ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಯಿತು.