ತ್ರಿಡಿ ಲ್ಯಾಪ್ರೋಸ್ಕೋಪಿಕ್ ತಂತ್ರಜ್ಞಾನ ಬಳಸಿ, ಲಿವರ್ ಕ್ಯಾನ್ಸರ್ ಯಶಸ್ವಿ ಶಸ್ತ್ರ ಚಿಕಿತ್ಸೆ

6
Published on

ಮೈಸೂರು: ವಿಜಯನಗರ ಮೂರನೇ ಹಂತದಲ್ಲಿರುವ ಕ್ಲಿಯರ್‌ಮೆಡಿ ರೇಡಿಯಂಟ್ ಆಸ್ಪತ್ರೆಯಲ್ಲಿ ಇದೇ ಪ್ರಥಮ ಬಾರಿಗೆ ತ್ರಿಡಿ ಲ್ಯಾಪ್ರೋಸ್ಕೋಪಿಕ್ ತಂತ್ರಜ್ಞಾನದ ಮೂಲಕ ಅಪರೂಪದ ಯಕೃತ್ (ಲಿವರ್) ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ.
ನಗರದ 74 ವರ್ಷದ ಮಹಿಳೆಯ ಬಲಭಾಗದ ಲಿವರ್‌ನಲ್ಲಿ ಕ್ಯಾನ್ಸರ್ ಗಡ್ಡೆ ಕಾಣಿಸಿಕೊಂಡಿತ್ತು. ಬಲಭಾಗ ತುಂಬಾ ಕ್ಲಿಷ್ಟಕರವಾಗಿ, ಶಸ್ತ್ರಚಿಕಿತ್ಸೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಅದನ್ನು ನಮ್ಮ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಆಸ್ಪತ್ರೆಯ ಸರ್ಜಿಕಲ್ ಆಂಕೊಲಜಿ ವಿಭಾಗದ ಸಲಹೆಗಾರ ಡಾ.ಎಲ್. ನಿಶ್ಚಲ್‌ರಾಜ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತ್ರಿಡಿ ಲ್ಯಾಪ್ರೋಸ್ಕೋಪಿಕ್ ತಂತ್ರಜ್ಞಾನದ ಮೂಲಕ ಸುಮಾರು 10 ಗಂಟೆಗಳ ಕಾಲ ಯಶಸ್ವಿ ಶಸಚಿಕಿತ್ಸೆ ನಡೆಸಲಾಗಿದೆ. ಈ ಕಾರ್ಯದಲ್ಲಿ ತಾವೂ ಸೇರಿದಂತೆ ಡಾ.ಅದ್ನಾನ್ ಸಯ್ಯದ್, ಡಾ.ಸತೀಶ್ ದುಗೇಶ್, ಡಾ.ಸುದೀಶ್ ದುಗೇಶ್, ಮುಖ್ಯ ಅರಿವಳಿಕೆ ತಜ್ಞೆ ಡಾ.ಜ್ಯೋತಿ ಅವರನ್ನೊಳಗೊಂಡ ನುರಿತ ವೈದ್ಯರ ತಂಡ ಸಹಕಾರ ನೀಡಿತು ಎಂದು ಹೇಳಿದರು.
ಹತ್ತು ಎಂ.ಎಂ. ನಷ್ಟು ರಂಧ್ರ ಮಾಡಿ ಸುಮಾರು ಒಂದೂವರೆ ಕೆ.ಜಿ.ಯಷ್ಟು ದೊಡ್ಡ ಕ್ಯಾನ್ಸರ್ ಗಡ್ಡೆಯನ್ನು ಹೊರ ತೆಗೆಯಲಾಯಿತು. ರೋಗಿಯ ಆತ್ಮಸ್ತೈರ್ಯ, ಸಕಾರಾತ್ಮಕ ಮನೋಭಾವ ಚಿಕಿತ್ಸೆ ಲಕಾರಿಯಾಗಲು ಸಹಾಯಕವಾಯಿತು. ಶಸ್ತ್ರಚಿಕಿತ್ಸೆ ಬಳಿಕ ಒಂದು ವಾರದಲ್ಲಿ ಚೇತರಿಸಿಕೊಂಡು ಮನೆಗೆ ತೆರಳಿದರು ಎಂದರು.
ಈ ಹಿಂದೆ ತ್ರಿ-ಡಿ ತಂತ್ರಜ್ಞಾನದ ಚಿಕಿತ್ಸೆ ಪಡೆಯಲು, ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರು, ಮುಂಬಯಿ ಸೇರಿದಂತೆ ಮೆಟ್ರೋಪಾಲಿಟಿನ್ ನಗರಗಳಿಗೆ ಹೋಗಬೇಕಾಗಿತ್ತು. ಆದರೆ ನಮ್ಮ ಮೈಸೂರಿನಲ್ಲಿ ಇದೇ ಪ್ರಥಮ ಬಾರಿಗೆ ತ್ರಿಡಿ ಲ್ಯಾಪ್ರೋಸ್ಕೋಪಿಕ್ ತಂತ್ರಜ್ಞಾನದ ಮೂಲಕ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ ಎಂದು ಹೇಳಿದರು.
ಇತ್ತೀಚಿನ ಜೀವನಶೈಲಿ, ಆಹಾರ ಪದ್ಧತಿ, ಅತಿಯಾದ ರಾಸಾಯನಿಕ ಬಳಕೆಯಿಂದ ನಾನಾ ಬಗೆಯ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಹೆಚ್ಚಾಗಿ ಸ್ತನಕ್ಯಾನ್ಸರ್, ಕರುಳಿನ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ಅತಿಯಾದ ಮದ್ಯ ಸೇವನೆ, ಧೂಮಪಾನ ಮಾಡುವವರಿಗೆ ಕ್ಯಾನ್ಸರ್ ಬಹುಬೇಗ ಆವರಿಸಿಕೊಳ್ಳುತ್ತದೆ. ಆದ್ದರಿಂದ ಜೀವನಶೈಲಿ ಬದಲಾವಣೆ, ರಾಸಾಯನಿಕಮುಕ್ತ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು, ದೈಹಿಕ ವ್ಯಾಯಾಮ ಅವಶ್ಯಕ ಎಂದು ಸಲಹೆ ನೀಡಿದರು.
ಕ್ಲಿಯರ್‌ಮೆಡಿ ರೇಡಿಯಂಟ್ ಆಸ್ಪತ್ರೆಯ ೆಸಿಲಿಟಿ ಡೈರೆಕ್ಟರ್ ನಾಗೇಶ್ ಶಿಂಧೆ, ಡಾ.ಜ್ಯೋತಿ, ಡಾ.ಅದ್ನಾನ್ ಸಯ್ಯದ್, ಡಾ.ಸತೀಶ್ ದುಗೇಶ್, ಡಾ.ಸುದೀಶ್ ದುಗೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net