ಗರ್ಭಿಣಿಯ ಹೊಟ್ಟೆಯಲ್ಲಿದ್ದ ಫೈಬ್ರೋಯ್ಡ್ ಗಡ್ಡೆಯ ಯಶಸ್ವಿ ಶಸ್ತ್ರ ಚಿಕಿತ್ಸೆ

ylp-hospital-operation
Published on

ಯಲ್ಲಾಪುರ: ಗರ್ಭಕೋಶದಲ್ಲಿ ಫೈಬ್ರೋಯ್ಡ್  ಗಡ್ಡೆಗಳಿದ್ದ ಗರ್ಭಿಣಿ ಮಹಿಳೆಗೆ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಪಟ್ಟಣದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರು, ಸಿಬ್ಬಂದಿಯ ತಂಡ ತಾಯಿ ಹಾಗೂ ಮಗುವಿನ ಆರೋಗ್ಯ ಕಾಪಾಡಿದ್ದಾರೆ. 

30 ವರ್ಷದ ಮಹಿಳೆಯ ಗರ್ಭಕೋಶದಲ್ಲಿ 10X10 ಸೆಂಟಿ ಮೀಟರ್,  9X8 ಸೆಂಟಿಮೀಟರ್ ಮತ್ತು ಹತ್ತಕ್ಕೂ ಹೆಚ್ಚು 3X5 ಸೆಂಟಿಮೀಟರ್ ಅಳತೆಯ ಫೈಬ್ರೋಯ್ಡ್ ಗಡ್ಡೆಗಳಿದ್ದವು.  ಆರಂಭದಿಂದ ಪಟ್ಟಣದ ತಾಲೂಕು ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ.ದೀಪಕ್ ವಿ ಭಟ್ಟ ಅವರ ಚಿಕಿತ್ಸೆ ಪಡೆದಿದ್ದರು. 

ಗರ್ಭಕೋಶದ ಕೊರಳಿಗೆ ದೊಡ್ಡ ಫೈಬ್ರೋಯ್ಡ್ ಗಡ್ಡೆಯು ಅಡ್ಡವಿದ್ದುದರಿಂದ ಅಪರೂಪದ ಸಿಸೇರಿಯನ್ ಮಾಡಬೇಕಾದ ಅನಿವಾರ್ಯತೆ ಒದಗಿತು. ಶಸ್ತ್ರಚಿಕಿತ್ಸೆಯ ಮೂಲಕ ಡಾ. ದೀಪಕ ಭಟ್ಟ, ಡಾ.ವರ್ಷಾ ಮಂಜುನಾಥ, ಸಿಬ್ಬಂದಿ ಲತಾ ಶೆಟ್ಟಿ, ಸೀಮಾ ಮಡಿವಾಳ ಹಾಗೂ ನಿಂಗಮ್ಮ ಅವರ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ತಾಯಿ ಹಾಗೂ ಮಗುವನ್ನು ರಕ್ಷಿಸಿದರು. ಮಗುವಿನ ಕೊರಳ ಸುತ್ತ  ನಾಲ್ಕೂವರೆ ಸುತ್ತಿನ ಹೊಕ್ಕುಳ ಬಳ್ಳಿ ಇದ್ದುದೂ ವಿಶೇಷವಾಗಿದೆ.

ಗರ್ಭಕೋಶದಲ್ಲಿ ಫೈಬ್ರೋಯ್ಡ್  ಗಡ್ಡೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.  ಅದರಲ್ಲೂ ಹಲವಾರು ಫೈಬ್ರೋಯ್ಡ್   ಗಡ್ಡೆಗಳಿಂದ ಕೂಡಿದ  ಮಹಿಳೆ ಗರ್ಭಿಣಿಯಾಗುವುದು ಹಾಗೂ ಸುರಕ್ಷಿತ ಪ್ರಸವವಾಗುವುದು ಅತಿ ಅಪಾಯಕಾರಿ. ಹೀಗೆ ಗಡ್ಡೆಗಳಿದ್ದಾಗ ಗರ್ಭಪಾತ, ಮಲಮೂತ್ರ ವಿಸರ್ಜನೆಯಲ್ಲಿ ತೊಂದರೆ, ಗರ್ಭಕೋಶದಲ್ಲಿ ಶಿಶುವಿನ ಅಡ್ಡ ತಿರುಗುವಿಕೆ, ಹೆರಿಗೆ ನಂತರದ  ಹೆಚ್ಚಿನ ರಕ್ತಸ್ರಾವ ಇತ್ಯಾದಿಗಳು ಆಗುವ ಸಂಭವವಿರುತ್ತದೆ ಎನ್ನುತ್ತಾರೆ ಡಾ.ದೀಪಕ ಭಟ್ಟ. 

 ಇಂತಹ ಅಪರೂಪದ ಶಸ್ತ್ರ ಚಿಕಿತ್ಸೆಯ ಮೂಲಕ ಮಹಿಳೆ ಹಾಗೂ ಮಗುವಿನ ಜೀವ ಉಳಿಸಿದ ವೈದ್ಯರ ತಂಡಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net