ಮಹಿಳೆ ಹೊಟ್ಟೆಯಲ್ಲಿತ್ತು 6 ಕೆ.ಜಿ ತೂಕದ ಗಡ್ಡೆ: ಎರಡು ಗಂಟೆಯ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಸರ್ಕಾರಿ ವೈದ್ಯರು

Successful Surgery Govt Hospital mandya
Published on

ಮಳವಳ್ಳಿ: ಮಹಿಳೆಯ ಹೊಟ್ಟೆಯಲ್ಲಿದ್ದ ಬರೋಬರಿ ಆರು ಕೆ.ಜಿ ತೂಕದ ಗರ್ಭಕೋಶದ ಗಡ್ಡೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯರು ಫೆ.20 ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಆಕೆಗೆ ಎದುರಾಗಬಹುದಾದ ಆರೋಗ್ಯ ಸಮಸ್ಯೆಯಿಂದ ಪಾರಾಗಿದ್ದಾರೆ.

ಮದ್ದೂರು ತಾಲೂಕು ದೊಡ್ಡರಸಿನಕೆರೆ ಗ್ರಾಮದ ಜ್ಯೋತಿ(40) ಎಂಬಾಕೆ ಕಳೆದ ಆರು ತಿಂಗಳಿನಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಹಲವು ಆಸ್ಪತ್ರೆಯಲ್ಲಿ ತಪಾಸಣೆಗೊಳಪಟ್ಟಿದ್ದರು. ಆದರೆ ಗಡ್ಡೆಯನ್ನು ಹೊರತೆಗೆಯಲು ಲಕ್ಷಾಂತರ ರೂ ವೆಚ್ಚವಾಗಲಿದೆ ಎನ್ನುವ ಮಾಹಿತಿಯನ್ನು ವೈದ್ಯರು ನೀಡಿದ್ದರು. ಈ ನಡುವೆ ಸರ್ಕಾರಿ ವೈದ್ಯರೊಬ್ಬರು ಸಲಹೆ ಮೇರೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದರು.

ಬಳಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸಂಜಯ್ ನೇತೃತ್ವದಲ್ಲಿ ಮಹಿಳೆಯನ್ನು ಪರೀಕ್ಷೆ ನಡೆಸಿ ನಂತರ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಲಾಯಿತು. ಶಸ್ತ್ರಚಿಕಿತ್ಸೆ ತಜ್ಞ ಡಾ.ಮುರಳೀಧರ್, ಪ್ರಸೂತಿ ತಜ್ಞೆಯರಾದ ಡಾ.ರೇಣುಕಾ ದೇವಿ, ಡಾ.ಜ್ಯೋತಿ, ಅರವಳಿಕೆ ತಜ್ಞರಾದ ಡಾ.ಪ್ರಶಾಂಶ್, ಡಾ.ಶಿಲ್ಪಾ ನೇತೃತ್ವದ ತಂಡ ಮಂಗಳವಾರ ಮಧ್ಯಾಹ್ನ ಸತತ ಎರಡು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ 6 ಕೆ.ಜಿ ತೂಕದ ಗರ್ಭಕೋಶದ ಗಡ್ಡೆಯನ್ನು ಹೊರತೆಗೆದಿದ್ದಾರೆ. ವೈದ್ಯರ ತಂಡಕ್ಕೆ ದಾದಿಯರಾದ ವಿದ್ಯಾ, ಸುಂದರಮ್ಮ ಸಾಥ್ ನೀಡಿದ್ದಾರೆ.

ಶ್ಲಾಘನೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಇತ್ತೀಚೆಗೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಹೊಸ ತಂತ್ರಜ್ಞಾನವುಳ್ಳ ನೂತನ ಶಸ್ತ್ರಚಿಕಿತ್ಸಾ ಕೊಠಡಿಯನ್ನು ಉದ್ಘಾಟಿಸಿದ್ದರು. ಇದಾದ ಬಳಿಕ ಮೊದಲ ಬಾರಿಗೆ ಮಹತ್ವದ ಹಾಗೂ ಅಪರೂಪದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಹಾಗೂ ತಂಡದ ಸೇವೆಯನ್ನು ಮಹಿಳೆಯ ಕುಟುಂಬದ ಸದಸ್ಯರು ಶ್ಲಾಘಿಸಿದ್ದಾರೆ.

ಮಹಿಳೆ ನಮ್ಮ ಆಸ್ಪತ್ರೆಗೆ ದಾಖಲಾದ ಬಳಿಕ ಪರೀಕ್ಷೆಗೊಳಪಡಿಸಲಾಯಿತು. ಆ ಸಮಯದಲ್ಲಿ ಗರ್ಭಕೋಶದಲ್ಲಿ ದೊಡ್ಡದಾದ ಗಡ್ಡೆ ಕಂಡುಬಂದಿತ್ತು. ಗಡ್ಡೆಯನ್ನು ಹೊರಗೆ ತೆಗೆಯದಿದ್ದರೆ ಆಕೆಯ ಪ್ರಾಣಕ್ಕೆ ಅಪಾಯವಿರುವುದು ಗೊತ್ತಾಯಿತು. ಈ ಹಿನ್ನೆಲೆಯಲ್ಲಿ ನಮ್ಮ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮಾಡಿ ಗಡ್ಡೆಯನ್ನು ಹೊರ ತೆಗೆದಿದ್ದಾರೆ. ಅದು ಆರು ಕೆ.ಜಿ ತೂಕವಿತ್ತು. ಈಗ ಮಹಿಳೆ ಆರೋಗ್ಯವಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ಸೌಲಭ್ಯಗಳಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು.

ಡಾ.ಎಂ.ಡಿ.ಸಂಜಯ್

ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ, ಮಳವಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net