ಮೈಸೂರಿನಲ್ಲಿ ಯಶಸ್ವಿ ರಾಜ್ಯ ಮಟ್ಟದ ಸ್ಕೂಲ್ ಬ್ಯಾಂಡ್ ಸ್ಪರ್ಧೆ

1
Published on

ಮೈಸೂರು: ಕ್ರೀಡಾ ಭಾರತಿಯಿಂದ ನಗರದ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಸ್ಕೂಲ್ ಬ್ಯಾಂಡ್ ಸ್ಪರ್ಧಾಕೂಟ ಗಮನ ಸೆಳೆಯಿತು.
ಯಾದವಗಿರಿಯಲ್ಲಿರುವ ಶಾಲೆಯಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗದಿಂದ ಒಟ್ಟು 14 ತಂಡಗಳು ಭಾಗವಹಿಸಿದ್ದವು. ಅವುಗಳಲ್ಲಿ 10 ತಂಡಗಳಿಗೆ ನಗದು ಪುರಸ್ಕಾರವಾಗಿ 10 ಸಾವಿರ ರೂ.ನಿಂದ ಒಂದು ಸಾವಿರ ರೂ. ವರೆಗೆ ಬಹುಮಾನ ನೀಡಲಾಯಿತು. ಅಲ್ಲದೆ, ಎಲ್ಲ ಸ್ಪರ್ಧಿಗಳಿಗೂ ಪ್ರಮಾಣಪತ್ರ, ವಾದನ, ಸಂಚಲನ, ವ್ಯೆಹ ರಚನೆ, ವಸ್ತ್ರಸಂಹಿತೆ ಹಾಗೂ ಪಥಸಂಚಲನ ಆಧರಿಸಿ ಅಂಕಗಳನ್ನು ನೀಡಲಾಯಿತು. ಸ್ಕೂಲ್ ಬ್ಯಾಂಡ್ ಸ್ಪರ್ಧೆಯಲ್ಲಿ ಬೆಂಗಳೂರಿನ ಯಲಹಂಕದ ಮಂಗಳ ವಿದ್ಯಾಮಂದಿರ ಚಾಂಪಿಯನ್ ಆಗಿ ಪ್ರಥಮ ಬಹುಮಾನ ಪಡೆಯಿತು.
ಹಾಸನದ ಹಳ್ಳಿಮೈಸೂರಿನ ಅನುಗ್ರಹ ವಿದ್ಯಾಸಂಸ್ಥೆ ದ್ವಿತೀಯ, ರಾಮನಗರದ ಶರತ್ ಮೆಮೋರಿಯಲ್ ಶಾಲೆ ತೃತೀಯ ಸ್ಥಾನ ಪಡೆದವು. ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಯಿತು. ಮೈಸೂರಿನ ವಿಜಯನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ 4ನೇ, ಚಾಮರಾಜನಗರದ ಸೇವಾಭಾರತಿ ಶಾಲೆ 5ನೇ, ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ 6ನೇ, ಬೆಂಗಳೂರಿನ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ 7ನೇ, ಪುತ್ತೂರಿನ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ 8ನೇ, ಮೈಸೂರಿನ ಮಹರ್ಷಿ ಪಬ್ಲಿಕ್ ಶಾಲೆ 9ನೇ ಹಾಗೂ ಕನಕಪುರದ ಮಂಗಳ ವಿದ್ಯಾಮಂದಿರ 10ನೇ ಸ್ಥಾನ ಪಡೆದವು.
ಸ್ಪರ್ಧೆಗೆ ಚಾಲನೆ ನೀಡಿದ ರಾಮಕೃಷ್ಣ ವಿದ್ಯಾಶಾಲೆಯ ಸ್ವಾಮಿ ಯುಕ್ತೇಶಾನಂದಜೀ ಮಾತನಾಡಿ, ಮನುಷ್ಯ ನಿರ್ಮಾಣದಿಂದಲೇ ದೇಶದ ನಿರ್ಮಾಣವಾಗುತ್ತದೆ. ಅದೇ ಶಿಕ್ಷಣದ ಗುರಿ. ಶಾರೀರಿಕ, ಬೌದ್ಧಿಕ ಹಾಗೂ ಅಧ್ಯಾತ್ಮದ ಬೆಳವಣಿಗೆಗೆ ಕ್ರೀಡೆ ಸಹಕಾರಿಯೆಂದು ವಿವೇಕರು ಹೇಳಿದ್ದರು. ವಿವೇಕಾನಂದರ ಜನ್ಮದಿನದಂದೇ ಸ್ಪರ್ಧೆ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಎನ್‌ಸಿಸಿ 13 ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಎಸ್.ಜೆ.ಎಸ್.ಸಾಂದ್ರ, ಅರಮನೆ ಪೊಲೀಸ್ ಬ್ಯಾಂಡ್‌ನ ಆರ್.ಮೋಹನ್, ಆರ್‌ಎಸ್‌ಎಸ್‌ನ ಸತೀಶ್, ಕ್ರೀಡಾ ಭಾರತಿ ರಾಜ್ಯ ಸಹ ಕಾರ್ಯದರ್ಶಿ ಬಸವರಾಜ್, ಪ್ರಾಂತ ಉಪಾಧ್ಯಕ್ಷ ಎಸ್.ಆರ್.ಪ್ರಕಾಶ್, ಕಾರ್ಯದರ್ಶಿ ಮಹೇಶ್ ಪ್ರಸಾದ್, ಜಿಲ್ಲಾಧ್ಯಕ್ಷ ಬಸವರಾಜ್, ವಿಭಾಗ ಸಂಯೋಜಕ ಪರಮೇಶ್, ಖಜಾಂಚಿ ಪ್ರಶಾಂತ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net