15.90 ಲಕ್ಷ ಕುಟುಂಬಗಳನ್ನು ಬೆಳಗಿಸಿದ ಗೃಹ ಜ್ಯೋತಿ ಮೆಸ್ಕಾಂ ವ್ಯಾಪ್ತಿಯಲ್ಲಿ ಯಶಸ್ವಿ ಜಾರಿ, ಶೇ. 96.90ರಷ್ಟು ಯಶಸ್ವಿ

mescom
Published on

ಮಂಗಳೂರು: ರಾಜ್ಯ ಸರ್ಕಾರದ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ಗೃಹಜ್ಯೋತಿ ಯೋಜನೆಗೆ ಮೆಸ್ಕಾಂ ವ್ಯಾಪ್ತಿಯಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಮೇ ಅಂತ್ಯದವರೆಗೆ 15.90 ಲಕ್ಷಕ್ಕೂ ಹೆಚ್ಚು ಗ್ರಾಹಕರು ಇದರ ಅನುಕೂಲ ಪಡೆದಿದ್ದಾರೆ.


ಗೃಹಜ್ಯೋತಿ ಯೋಜನೆ ಜಾರಿಯಾದ ಬಳಿಕ ಮೇ ಅಂತ್ಯದವರೆಗೆ ಒಟ್ಟು 16,41,513 ಗ್ರಾಹಕರು ಅರ್ಜಿ ಸಲ್ಲಿಸಿದ್ದು, ಈ ಪೈಕಿ 15,90,694 ಫಲಾನುಭವಿಗಳು ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಆ ಮೂಲಕ ಶೇ. 96.90ರಷ್ಟು ಯಶಸ್ವಿಯಾಗಿದೆ.


ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ 2023ರ ಆಗಸ್ಟ್ 1ರಂದು ಕಲಬುರಗಿಯಲ್ಲಿ ಚಾಲನೆ ನೀಡಲಾಗಿತ್ತು. ಮಾಸಿಕ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡುವ ಎಲ್ಲಾ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ,ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಇದರ ಲಾಭವನ್ನು ಲಕ್ಷಾಂತರ ಜನರು ಪಡೆಯುತ್ತಿದ್ದಾರೆ. ಆಗಸ್ಟ್-2023 ರಿಂದ ಮೇ-2024 ಅಂತ್ಯದವರೆಗೆ ಮಾಸಿಕ ಸರಾಸರಿ 80 ಕೋಟಿ ರೂ. ಸಹಾಯಧನವನ್ನು ರಾಜ್ಯ ಸರ್ಕಾರ ಮೆಸ್ಕಾಂಗೆ ಬಿಡುಗಡೆ ಮಾಡಿದೆ.


ಗೃಹಜ್ಯೋತಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 5,10,730 ಮಂದಿ ಫಲಾನುಭವಿಗಳಿದ್ದು, ಉಡುಪಿ ಜಿಲ್ಲೆಯಲ್ಲಿ 3,11,348, ಶಿವಮೊಗ್ಗ ಜಿಲ್ಲೆಯಲ್ಲಿ 4,68,085 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 3,00,531 ಫಲಾನುಭವಿಗಳಿದ್ದು, ಈವರೆಗೆ ಸರ್ಕಾರದಿಂದ 801.54 ಕೋಟಿ ರೂ.ಸಹಾಯಧನ ಬಿಡುಗಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಏನಿದು ಗೃಹಜ್ಯೋತಿ ಯೋಜನೆ?
ರಾಜ್ಯದಲ್ಲಿ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೆ ಉಚಿತ ವಿದ್ಯುತ್ ಪೂರೈಸಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ ಗೃಹಜ್ಯೋತಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಜನರು ಯೋಜನೆ ಜಾರಿಗೆ ಮುನ್ನ ಬಳಸುತ್ತಿದ್ದ ವಾರ್ಷಿಕ ಸರಾಸರಿ (200 ಯೂನಿಟ್ ಒಳಗಿದ್ದರೆ) ಅಥವಾ ಅದಕ್ಕಿಂತ 10 ಯೂನಿಟ್ ಹೆಚ್ಚುವರಿ ವಿದ್ಯುತ್ ಬಳಕೆ ಮಾಡಿದರೆ ಅಂಥವರು ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ. ಒಂದೊಮ್ಮೆ ಅದಕ್ಕಿಂತ ಹೆಚ್ಚು ವಿದ್ಯುತ್ ಬಳಸಿದರೆ ಅಥವಾ ಮಾಸಿಕ ಬಳಕೆ ಯೂನಿಟ್ 200ರ ಗಡಿ ದಾಟಿದರೆ ಆಗ ಪೂರ್ಣ ಮೊತ್ತದ ಬಿಲ್ ಪಾವತಿಸಬೇಕು. ಈ ಯೋಜನೆ ಜಾರಿಯಾದಾಗಿನಿಂದ ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಇದರ ಲಾಭ ಪಡೆದಿದ್ದಾರೆ.

ಕೊಟ್ಟ ಮಾತಿನಂತೆ 200 ಯೂನಿಟ್‌ವರೆಗೆ ವಿದ್ಯುತ್ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಯನ್ನು ಸಾಕಾರಗೊಳಿಸಿ, ಮನೆ ಮನೆಯ ದೀಪ ಬೆಳಗಿದ್ದೇವೆ. ಉಚಿತ ವಿದ್ಯುತ್ ಯೋಜನೆಯಿಂದ ಉಳಿತಾಯದ ಹಣವನ್ನು ಜನರು ಶಿಕ್ಷಣ, ಆರೋಗ್ಯ ಸೇರಿದಂತೆ ಇತರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಆ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯಾಗುತ್ತಿರುವ ತೃಪ್ತಿ ನಮಗಿದೆ.
ಕೆ.ಜೆ.ಜಾರ್ಜ್, ಇಂಧನ ಸಚಿವರು

ನಾಗರೀಕರಿಗೆ ಅವಶ್ಯವಾದ ಮೂಲ ಸೌಕರ್ಯಗಳಲ್ಲಿ ವಿದ್ಯುಚ್ಛಕ್ತಿ ಒಂದು. ಇಂತಹ ಸೌಲಭ್ಯವನ್ನು ಅರ್ಹ ಗೃಹ ಬಳಕೆದಾರರಿಗೆ ಗೃಹಜ್ಯೋತಿ ಯೋಜನೆಯಡಿ ಉಚಿತವಾಗಿ ನೀಡುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಮೆಸ್ಕಾಂ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಜಾರಿಗೊಂಡಿದ್ದು, ಯೋಜನೆಯ ಲಾಭವನ್ನು ಗ್ರಾಹಕರು ಪಡೆಯುತ್ತಿದ್ದಾರೆ.
ಡಿ.ಪದ್ಮಾವತಿ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net