ವಿನಯತೆಯಿಂದ ಸಿಗಲಿದೆ ಯಶಸ್ಸು

29 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳು ನಮೃತೆ, ವಿನಯತೆ, ಶ್ರದ್ಧೆ ಹಾಗೂ ಕಠಿಣ ಪರಿಶ್ರಮದಿಂದ ಕ್ರಿಯಾಶೀಲರಾದಲ್ಲಿ ಯಶಸ್ಸು ಸಿಗಲಿದೆ. ಮನಸ್ಸಿಗೆ ತೆಗೆದುಕೊಳ್ಳುವ ಶಿಕ್ಷಣಕ್ಕಿಂತ ಹೃದಯಕ್ಕೆ ಪಡೆಯುವ ಶಿಕ್ಷಣ ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ ಎಂದು ಕಿಶೋರ ಕೌಶಲ ತರಬೇತಿ ಕೇಂದ್ರದ ಮುಖ್ಯಸ್ಥ ಸತೀಶ ನಾಡಿಗೇರ ಹೇಳಿದರು.

ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಅವ್ವಪ್ಪಣ್ಣ ಅತ್ತಿಗೇರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಲಿಂಗಾಯತ ನಗರಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ 2024ನೇ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಿರಿಯ ತರಬೇತುದಾರರಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರಗಳನ್ನು ವಿತರಿಸುವ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

ಅಜಿತ ದಾನಿ ಮಾತನಾಡಿ, ನಮ್ಮ ಗಮನ ಕರ್ಮದ ಕಡೆ ಇರಬೇಕೆ ಹೊರತು ಫಲಾಫಲದ ಕಡೆಗೆ ಅಲ್ಲ. ನಾವು ನಿರಂತರ ಅಧ್ಯಯನ, ಕೌಶಲ್ಯಯುತ ತರಬೇತಿ ಪಡೆದಾಗ ನಾವು ಸಮರ್ಥವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಬಸವರಾಜ ತಾಳಿಕೋಟಿ ಮಾತನಾಡಿ, ಗುರುಗಳ ಮಾರ್ಗದರ್ಶನದಿಂದ ಉತ್ತಮ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಬೇಕು ಎಂದರು.

ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ತರಬೇತುದಾರರಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ವಿತರಿಸಲಾಯಿತು. ತರಬೇತಿ ಸಂಸ್ಥೆ ಆಡಳಿತ ಉಸ್ತುವಾರಿ ಎಸ್​.ಎಂ.ಅಗಡಿ, ಆಡಳಿತ ಮಂಡಳಿ ಸದಸ್ಯ ಎಂ.ಆರ್​.ಇಂಡಿ, ಇತರರು ಇದ್ದರು.

ತರಬೇತಿ ಸಂಸ್ಥೆ ಪ್ರಾಚಾರ್ಯ ಎಸ್​.ಎಂ. ಬಮ್ಮನಗೌಡರ ಸ್ವಾಗತಿಸಿದರು. ತರಬೇತಿ ಸಂಸ್ಥೆ ಕಚೇರಿ ಅಧೀಕ್ಷಕ ಶಿವಲಿಂಗ ನೀಲಗುಂದ ನಿರೂಪಿಸಿದರು. ಕೆ.ಎಚ್​.ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net